ಮೂರ್ನಾಲ್ಕು ದಿನದಿಂದ ಸಿಎಂ ಬೊಮ್ಮಾಯಿ ಕಣ್ಣೀರು ಹಾಕುತ್ತಿದ್ದಾರೆ: ಎಂ.ಪಿ ರೇಣುಕಾಚಾರ್ಯ

Update: 2022-07-30 11:47 GMT

ಬೆಂಗಳೂರು, ಜು. 30: ‘ಮೂರ್ನಾಲ್ಕು ದಿನದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕುತ್ತಿದ್ದಾರೆ. ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದಾಗ ನೀವು ಸರಕಾರದ ಒಂದು ಭಾಗ ನೀವು ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದಾರೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಾಂಗ್ರೆಸ್ ಸರಕಾರ ಇದ್ದಾಗ ಮೂವತ್ತಕ್ಕೂ ಹೆಚ್ಚು ಹಿಂದುಗಳ ಹತ್ಯೆಯಾಗಿದೆ. ನನಗೆ ವೈಯಕ್ತಿಕವಾಗಿ ಅಧಿಕಾರಕ್ಕಿಂತ ನಮ್ಮ ಹಿಂದೂ ಕಾರ್ಯಕರ್ತರ ರಕ್ಷಣೆಯೇ ಮುಖ್ಯ, ಆದುದರಿಂದ ನಮ್ಮ ಸರಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ನನ್ನ ಮತ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಶಾಸಕ ಸ್ಥಾನಕ್ಕೆ ‘ರಾಜೀನಾಮೆ' ನೀಡಲು ಯೋಚಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

‘ಕಾರ್ಯಕರ್ತರೆ ಪಕ್ಷದ ಶಕ್ತಿ' ನಾನು ಕಾರ್ಯಕರ್ತರಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡುತ್ತೇನೆ. ರಾಜೀನಾಮೆಯನ್ನು ವಾಪಸ್ ಪಡೆಯಬೇಕು, ನಾವು ನಿಮ್ಮೊಂದಿಗಿದ್ದೇವೆ ಎಂದು ಮನವಿ ಮಾಡುತ್ತೇನೆ. ಸಂಘಪರಿವಾರದವರು, ಮುಖಂಡರು ರಾಜೀನಾಮೆ ಕೊಡಬಾರದೆಂದು ಹೇಳಿದ್ದಾರೆ. ಯಾರು ಸಮಾಜಘಾತುಕ ಶಕ್ತಿಗಳಿದ್ದಾರೋ ಅವರಿಗೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮ ಜರುಗಿಸಲಾಗುವುದು. ಸಮಾಜಘಾತುಕ ಶಕ್ತಿಗಳನ್ನು ಎನ್‍ಕೌಂಟರ್ ಮಾಡುವುದರ ಜೊತೆಗೆ ಅವರ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು' ಎಂದು ರೇಣುಕಾಚಾರ್ಯ ಆಗ್ರಹಿಸಿದರು.

‘ಎಬಿವಿಪಿ ಯುವಕರು, ಸಂಘ ಪರಿವಾರದ ಸಂಘಟನೆಗಳು, ಪಕ್ಷದ ಕಾರ್ಯಕರ್ತರಲ್ಲಿ ಕಳಕಳಿಯ ಮನವಿ ಮಾಡುತ್ತೇನೆ. ಪ್ರವೀಣ್ ಹತ್ಯೆ ಮಾಡಿದವರಿಗೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದ್ದಾರೆ. ಮೂರ್ನಾಲ್ಕು ದಿನದಿಂದ ಮುಖ್ಯಮಂತ್ರಿಗಳು ನೋವಿನಲ್ಲಿದ್ದಾರೆ. ಯಾರೂಕೂಡ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ'

-ಎಂ.ಪಿ.ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News