ವಿಜಯನಗರ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆದೇಶ ರದ್ದು
ಬೆಂಗಳೂರು, ಜು. 30: ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿಯನ್ನಾಗಿ ಆನಂದ್ ಸಿಂಗ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವೆಯನ್ನಾಗಿ ಶಶಿಕಲಾ ಜೊಲ್ಲೆ ಅವರನ್ನು ನೇಮಿಸಿ ಶನಿವಾರ ಹೊರಡಿಸಿದ್ದ ಆದೇಶವನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ರದ್ದುಪಡಿಸಲಾಗಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿವಿಜಯನಗರ ನೂತನ ಜಿಲ್ಲೆ ರಚನೆ ಬಳಿಕ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ತಮಗೆ ನೀಡಬೇಕೆಂದು ಸಚಿವ ಆನಂದ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದರು. ಆದರೆ, ಆನಂದ್ ಸಿಂಗ್ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿತ್ತು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು.
ಆ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಬೆಂಬಲಿಗರು ಜಿಲ್ಲೆಯಲ್ಲಿ ಬೀದಿಗಿಳಿದು ಹೋರಾಟವನ್ನೂ ಮಾಡಿದ್ದರು. ಇದೀಗ ಆನಂದ್ ಸಿಂಗ್ ಅವರನ್ನೇ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಬಳಿಕ ಬದಲಾವಣೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿಗೆ ಅದೇ ಜಿಲ್ಲೆಯ ಸಚಿವರನ್ನು ನೇಮಕ ಮಾಡಬಾರದೆಂಬ ನಿಯಮ ಮಾಡಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿಯನ್ನು ಆನಂದ್ ಸಿಂಗ್‍ಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಅದೇ ಕಾರಣಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ನೀಡಿಲ್ಲ ಎಂದು ಗೊತ್ತಾಗಿದೆ. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಶಶಿಕಲಾ ಜೊಲ್ಲೆ ಅವರೇ ಮುಂದುವರಿಯಲಿದ್ದಾರೆ.