ಫಾಝಿಲ್, ಮಸೂದ್ ಗೆ ನಿಮ್ಮಿಂದ ಸಾಂತ್ವನ ಬೇಡವೇ: ಮುಖ್ಯಮಂತ್ರಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-07-31 13:51 GMT

ಬೆಂಗಳೂರು, ಜು. 31: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೊಂದು ಬಹಿರಂಗ ಪತ್ರ. ನೀವು ಈ ರಾಜ್ಯದ ಮುಖ್ಯಮಂತ್ರಿ. ನೀವು ಅದೃಷ್ಟದ ಸಿಎಂ. ಬಿಜೆಪಿ ಕಟ್ಟಿದ ಬಿಎಸ್‍ವೈ ಅವರನ್ನು ತುಳಿದು ನೀವು ಸಿಎಂ ಆಗಿದ್ದೀರಿ. ಸದ್ಯ ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಪ್ರವೀಣ್ ಸಾವಿಗೆ ನೀವು ಸ್ಪಂದಿಸಿದ್ದು ಅನುಕರಣೀಯ. ಆದರೆ, ಫಾಝಿಲ್‍ ಹಾಗೂ ಮಸೂದ್‍ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬೊಮ್ಮಾಯಿಯವರೆ ನೀವು ರಾಜ್ಯದ ಯಜಮಾನನಿದ್ದಂತೆ. ಯಜಮಾನ ಎಲ್ಲರಿಗೂ ಸಲ್ಲುವನಂತಿರಬೇಕು. ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಆದರೆ, ನೀವು ಮಾಡಿದ್ದೇನು? ಪ್ರವೀಣ್ ಮನೆಗೆ ಹೋದಿರಿ, ಸರಕಾರದಿಂದ 25ಲಕ್ಷ ರೂ.ಪರಿಹಾರ ಕೊಟ್ಟಿದ್ದೀರಾ. ಇಲ್ಲಿ ತಕರಾರಿಲ್ಲ. ಆದರೆ, ಹತ್ಯೆಯಾದ ಮಸೂದ್, ಪಾಝಿಲ್ ಮಾಡಿದ ತಪ್ಪೇನು.? ಸತ್ತವರು ಮುಸ್ಲಿಮ್ ಆದರೆ ಅವರು ಪರಿಹಾರಕ್ಕೆ ಅರ್ಹರಲ್ಲವೆ?' ಎಂದು ಕೇಳಿದ್ದಾರೆ.

‘ಬೊಮ್ಮಾಯಿಯವರೆ, ಸಾವಿನ ಮನೆಯ ಸಂಕಟ ಅನುಭವಿಸಿದ್ದವರಿಗೆ ಗೊತ್ತು. ದುಡಿಯುವ ಮಗ, ವಯಸ್ಸಿಗೆ ಬಂದ ಮಗ ಕಣ್ಣೆದುರೇ ಶವವಾಗುವಾಗ ಅದನ್ನು ಭರಿಸುವ ಶಕ್ತಿ ಯಾವ ತಂದೆ-ತಾಯಿಗೂ ಇರುವುದಿಲ್ಲ. ‘ಪುತ್ರ ಶೋಕಂ ನಿರಂತರಂ'. ಇದು ಸಾರ್ವಕಾಲಿಕ ಸತ್ಯ. ಅದು ಹಿಂದೂ ಇರಲಿ, ಮುಸ್ಲಿಮರೇ ಇರಲಿ. ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ' ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

‘ಬಸವರಾಜ ಬೊಮ್ಮಾಯಿಯವರೆ, ನಿಮ್ಮ ಭಾಗದಲ್ಲಿ ಪಿಂಜಾರ ಸಮುದಾಯದ ಮುಸ್ಲಿಮರಿದ್ದಾರೆ. ನಿಮ್ಮಲ್ಲಿ ನಡೆಯುವ ಗಣೇಶೋತ್ಸವವಾಗಲಿ, ಉರುಸ್ ಆಗಲಿ ಅಲ್ಲಿ ಹಿಂದೂ-ಮುಸಲ್ಮಾನರ ಪರಸ್ಪರ ಭಾಗವಹಿಸುವಿಕೆಯಿದೆ, ಸೌರ್ಹಾದತೆಯಿದೆ. ಈ ಹಿಂದೆ ಕರಾವಳಿಯೂ ಭಾವೈಕ್ಯತೆಯ ನಾಡಾಗಿತ್ತು. ಕರಾವಳಿಯಲ್ಲಿ ಮಾಪಿಳ್ಳ ಮುಸಲ್ಮಾನರು, ಹಿಂದೂಗಳು ಒಟ್ಟಾಗಿಯೇ ಇದ್ದರು. ಈ ಸಂಬಂಧಕ್ಕೆ ಹುಳಿ ಹಿಂಡಿದ್ಯಾರು?' ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

‘ಬೊಮ್ಮಾಯಿಯವರೆ, ಸೌಹಾರ್ದೆತೆಯಿಂದಿದ್ದ ಕರಾವಳಿ ಇಂದು ಕೋಮುದಳ್ಳುರಿಯ ನೆಲವಾಗಿದ್ದಕ್ಕೆ ಕಾರಣ ಯಾರು? ಕರಾವಳಿಯನ್ನು ಹಿಂದೂ ಪ್ರಯೋಗ ಶಾಲೆ ಮಾಡಿದ್ದು ಯಾರು? ಕರಾವಳಿಯಲ್ಲಿ ಸಂಘಪರಿವಾರ ಮತ್ತು ಪಿಎಫ್‍ಐ ಬೆಳೆಯಲು ಕಾರಣ ಯಾರು?ಉತ್ತರ ನಿಮ್ಮ ಬಳಿಯೇ ಇದೆ. ನೀವು ಬಿತ್ತಿದ್ದೇ ಈಗ ಫಲವಾಗಿ ಸಿಗುತ್ತಿರುವುದಲ್ಲವೆ? ನೀವು ಜನತಾ ಪರಿವಾರದ ಹಿನ್ನಲೆಯವರು. ನಿಮಗೆ ಈ ಸೂಕ್ಷ್ಮ ಅರ್ಥವಾಗಿರಬೇಕೆಂದು ಭಾವಿಸಿದ್ದೇನೆ'
-ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News