ಓ ಮೆಣಸೇ ...

Update: 2022-07-31 18:50 GMT

ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಹಳೆಯವರನ್ನು ಕೇಳಿ ನೋಡಿ, ಯಾರೂ ಇರಲಿ ಇಲ್ಲದಿರಲಿ, ದ್ವೇಷ ಪ್ರಧಾನವಲ್ಲದ ಬಿಜೆಪಿಯನ್ನು ಊಹಿಸಲು ಸಾಧ್ಯವಿಲ್ಲ ಅಂತಾರೆ.

ಕೊನೆಯ ಬಾಲ್‌ನಲ್ಲಿ ಸಿಕ್ಸ್ ಹೊಡೆಯಲೇಬೇಕೆಂಬ ಅನಿವಾರ್ಯದಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ - ಆರ್.ಅಶೋಕ್, ಸಚಿವ
ಶೂನ್ಯಕ್ಕೆ ಔಟಾಗಿ ಮ್ಯಾಚ್ ಕಳ್ಕೊಂಡವರು, ಕ್ರೀಸ್‌ನಲ್ಲಿರುವ ಆಟಗಾರರ ಬಗ್ಗೆ ಮಾಡುವ ಕಮೆಂಟರಿಗಳಿಗೆ ಬೆಲೆ ಇಲ್ಲ.

ಮೋದಿ-ಶಾ ಆಡಳಿತದಲ್ಲಿ ಸಬ್ಕಾ ಸಾಥ್ ಅಲ್ಲ, ಅಂಬಾನಿ - ಅದಾನಿ ಕಾ ವಿಕಾಸ್ ಆಗುತ್ತಿದೆ - ಕೃಷ್ಣಬೈರೇಗೌಡ, ಶಾಸಕ
ಸಬ್ ಕಾ ವಿನಾಶ್?

ಡಿಕೆಶಿ ಒಕ್ಕಲಿಗ ಸಮುದಾಯದ ಓಲೈಕೆ ಮಾಡಿದ್ದರಲ್ಲಿ ತಪ್ಪೇನಿಲ್ಲ - ಡಾ.ಜಿ.ಪರಮೇಶ್ವರ್, ಶಾಸಕ
ಅದೇನೂ ಅಲ್ಪಸಂಖ್ಯಾತರು ಅಥವಾ ದಲಿತರನ್ನು ಓಲೈಸುವಂತಹ ಮಹಾಪರಾಧ ಅಲ್ಲ ತಾನೇ?

ಇಂದಿನ ರಾಜಕೀಯದಲ್ಲಿ ಯಾರು ಯಾವ ಪಕ್ಷದಲ್ಲಿದ್ದಾರೆ, ಯಾರು ಯಾರ್ಯಾರ ಜೊತೆ ಸಂಪರ್ಕದಲ್ಲಿರುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ವೀಡಿಯೊಗಳೆಲ್ಲಾ ಬರಲಾರಂಭಿಸಿದ ನಂತರ ಜನ ಊಹೆಗಳನ್ನು ಅವಲಂಬಿಸದೆ, ಯಾರು ಯಾವ ಕೆಸರ ಕೊಂಪೆಯಲ್ಲಿ ಮುಳುಗಿದ್ದಾರೆಂಬುದನ್ನು ಕಣ್ಣಾರೆ ಕಾಣುತ್ತಿದ್ದಾರೆ.

ಕಾಂಗ್ರೆಸ್‌ನವರು ಸಿಎಂ ಹುದ್ದೆಯನ್ನು ಅವರ ಅಪ್ಪನ ಆಸ್ತಿ ಅಂದುಕೊಂಡಿದ್ದಾರೆ -ಸಿ.ಟಿ.ರವಿ, ಶಾಸಕ
ಯಾರಪ್ಪನ ಆಸ್ತಿ ಎಂಬುದು ಖಚಿತವಾಗಿ ನಿರ್ಧಾರವಾಗುವ ತನಕ ಈ ತರದ ಗೊಂದಲಗಳು ಸಹಜ.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ - ಯಡಿಯೂರಪ್ಪ, ಮಾಜಿ ಸಿಎಂ
ಅವರು ನಿಮ್ಮ ಅನುಮತಿ ಕೇಳಿದರೆ ಈ ನಿಮ್ಮ ನಿಲುವನ್ನು ಅವರಿಗೆ ತಿಳಿಸಿ.

ಇಪ್ಪತ್ತೊಂದನೇ ಶತಮಾನ ಎನ್ನುವುದು ಭಾರತದ್ದೇ ಆಗಲಿದೆ -ರಾಮನಾಥ ಕೋವಿಂದ್, ಮಾಜಿ ರಾಷ್ಟ್ರಪತಿ
ಅದು ನಮ್ಮದಾಗಲಿದೆ ಎಂಬ ಕೆಲವು ವಿನಾಶಕಾರಿ ಪಕ್ಷ ಮತ್ತು ಸಂಘಟನೆಗಳ ವಾದ ಕೇಳಿ ಸುಸ್ತಾದವರಿಗೆ ಇದೊಂದು ನೆಮ್ಮದಿ ದಾಯಕ ಆಶ್ವಾಸನೆ.

ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಶಾಸಕ ಝಮೀರ್ ಅಹ್ಮದ್ ಹೇಳಿಕೆ ಅಧಿಕ ಪ್ರಸಂಗ - ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಮುಖ್ಯಮಂತ್ರಿಯಾಗಬೇಕಿದ್ದರೆ ಹಲವು ಅಧಿಕ ಪ್ರಸಂಗಗಳನ್ನು ಮಾಡಬೇಕಾಗುತ್ತದೆ ಎಂಬ ಗುಟ್ಟನ್ನು ಯಾರೋ ಝಮೀರ್‌ಗೆ ಹೇಳಿಕೊಟ್ಟಿದ್ದಾರಂತೆ.

ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು ಎಂದಾದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ - ಛಲವಾದಿ ನಾರಾಯಣ ಸ್ವಾಮಿ, ವಿ.ಪ.ಸದಸ್ಯ
ಆದರೆ ಅವರು ಬಯಸುವಷ್ಟು ಹೀನಾಯ ಮಟ್ಟದ ಗುಲಾಮ ಅಭ್ಯರ್ಥಿ ಸ್ವಾಭಿಮಾನಿ ದಲಿತ ಸಮುದಾಯದಲ್ಲಿ ಸಿಗಲಿಕ್ಕಿಲ್ಲ.

ನನ್ನ ಎಲ್ಲ ಕಾದಂಬರಿಗಳಲ್ಲಿ ಜೀವನಾನುಭವದ ಸಾರವನ್ನು ಕಟ್ಟಿಕೊಟ್ಟಿದ್ದೇನೆ -ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಬಿಚ್ಚಲು ಪುರುಸೊತ್ತು ಇರುವವರನ್ನು ಹುಡುಕೋಣ.

ಗಾಂಜಾ ವ್ಯಸನಿಗಳು ರೇಪ್, ರಾಬರಿ, ಮರ್ಡರ್‌ನಂತಹ ಗಂಭೀರ ಅಪರಾಧ ಮಾಡುವುದಿಲ್ಲ - ಡಾ.ಕೃಷ್ಣಮೂರ್ತಿ ಬಂಧಿ, ಛತ್ತೀಸ್‌ಗಡ ಶಾಸಕ
ರೇಪ್, ರಾಬರಿ, ಮರ್ಡರ್‌ನಂತಹ ಗಂಭೀರ ಅಪರಾಧಗಳನ್ನು ಮಾಡುವವರಿಗೆ ಗಾಂಜಾ ವ್ಯಸನಿಗಲಾಗುವಷ್ಟು ಪುರುಸೊತ್ತಿರುವುದಿಲ್ಲ ಅಂತೀರಾ?

ದೇಶದಲ್ಲಿ ಬಡವರ ಕನಸುಗಳೂ ನನಸಾಗುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ - ದ್ರೌಪದಿ ಮುರ್ಮು, ರಾಷ್ಟ್ರಪತಿ
ನೂರು ಕೋಟಿ ಬಡವರಲ್ಲಿ ಒಬ್ಬರ ಕನಸು ಮಾತ್ರ ನನಸಾಗುತ್ತದೆಂಬುದಕ್ಕೆ ಖಂಡಿತ ನೀವೇ ಸಾಕ್ಷಿ.

ಸಿದ್ಧಾಂತಕ್ಕಿಂತ ದೇಶ ಹಾಗೂ ಸಮಾಜವೇ ಮೊದಲು ಎಂಬುದು ಎಲ್ಲ ಪಕ್ಷಗಳ ತತ್ವವಾಗಿರಬೇಕು - ನರೇಂದ್ರ ಮೋದಿ, ಪ್ರಧಾನಿ
ಕೆಲವು ಶ್ರೀಮಂತರ ಮೆಚ್ಚುಗೆ ಗಳಿಸಲು ದೇಶ, ಸಮಾಜ, ಸಿದ್ಧಾಂತ ಎಲ್ಲವನ್ನೂ ಅಗ್ಗದ ಬೆಳೆಗೆ ಮಾರಿದವರು ಈ ರೀತಿಯ ಉಪದೇಶಗಳನ್ನು ನೀಡಿ ನಗೆಪಾಟಲಿಗೆ ಈಡಾಗಬಾರದು.

ಕುಟುಂಬ ರಾಜಕಾರಣ ತಪ್ಪಲ್ಲ, ನಾನೂ ಕುಟುಂಬ ರಾಜಕಾರಣ ಹಿನ್ನೆಲೆಯಿಂದಲೇ ಬಂದದ್ದು - ಉಮೇಶ್ ಕತ್ತಿ, ಸಚಿವ
ನೀವು ಡಕಾಯಿತ ಹಿನ್ನೆಲೆಯಿಂದ ಬರದೇ ಇದ್ದದ್ದು ಜನರ ಸೌಭಾಗ್ಯ.

ಕಾಂಗ್ರೆಸ್‌ನಲ್ಲಿದ್ದರೂ ದೇವೇಗೌಡರೇ ನನ್ನ ರಾಜಕೀಯ ಗುರು - ಝಮೀರ್ ಅಹ್ಮದ್, ಶಾಸಕ
ಹೀಗೆಲ್ಲ ಹೇಳಿ ಇಬ್ರಾಹೀಮ್ ಸಾಹೇಬರ ಹೊಸ ಉದ್ಯೋಗ ಕಸಿದುಕೊಳ್ಳುತ್ತೀರೇನು?

ಸಮಯ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿ ದಲಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ - ಪ್ರಿಯಾಂಕ್ ಖರ್ಗೆ, ಶಾಸಕ
ಅಷ್ಟು ಸುಲಭವಾಗಿ ಸಿಗುವುದಕ್ಕೆ ಅದೇನು ಗವರ್ನರ್ ಅಥವಾ ರಾಷ್ಟ್ರಪತಿ ಹುದ್ದೆಯೇ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ಯುವ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಗಿಟ್ಟಿಸುವ ನಿರೀಕ್ಷೆ ಇದೆ - ಮುಹಮ್ಮದ್ ನಲಪಾಡ್, ಯುವ ಕಾಂಗ್ರೆಸ್ ಅಧ್ಯಕ್ಷ
ಶಾಂತಿನಗರ ಸೀಟನ್ನು ಮುದುಕರೆಲ್ಲಿ ಬಿಟ್ಟುಕೊಡುತ್ತಾರೆ?

ಅಗತ್ಯ ವಸ್ತುಗಳ ಬೆಲೆ ಕೈಗೆಟಕುವ ದರದಲ್ಲಿರಬೇಕು - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ
 ಹಾಗಾದರೆ ಚಡ್ಡಿ, ದೊಣ್ಣೆ, ಈಟಿ, ತ್ರಿಶೂಲ ಮುಂತಾದವುಗಳಿಗೆ ಮಾತ್ರ ಸೀಮಿತವಾಗಿರದೆ, ಅಕ್ಕಿ, ಗೋಧಿ, ಸಕ್ಕರೆ, ಹಾಲು, ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ಮುಂತಾದವುಗಳನ್ನು ಒಳಗೊಂಡ ಒಂದು ‘ಅಗತ್ಯ ವಸ್ತುಗಳ’ ಪಟ್ಟಿಯನ್ನು ಪ್ರಕಟಿಸಿ.

ನನ್ನ ಬದುಕು ಸುಧಾರಿಸಿಕೊಳ್ಳಲು ನಾನು ರಾಜಕೀಯಕ್ಕೆ ಬಂದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ. ಸಿಎಂ
ಬದುಕು ಸುಧಾರಿಸಲು ಜನರು ರಾಜಕೀಯದಿಂದ ಓಡಿಹೋದದ್ದು ಮಾತ್ರ ಜನರಿಗೆ ಗೊತ್ತಿದೆ.

ನಾನು ಸನ್ಯಾಸಿಯಲ್ಲ, ಅದೃಷ್ಟವಿದ್ದರೆ ಸಿಎಂ ಆಗುತ್ತೇನೆ - ಎಂ.ಬಿ.ಪಾಟೀಲ್, ಶಾಸಕ
ಸಿಎಂ ಆಗಲು ಕೇವಲ ಅದೃಷ್ಟ ಸಾಲದು, ಸನ್ಯಾಸಿಯಾಗಿರಬೇಕು ಎನ್ನುತ್ತಾರಲ್ಲ, ಯೋಗಿಯವರು?

ಆತುರ, ಆತಂಕ, ಉದ್ವೇಗ ಅನಾಹುತಕ್ಕೆ ಕಾರಣವಾಗುತ್ತದೆ - ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ
ಇವೆಲ್ಲ ನೀಚರನ್ನು ಗದ್ದುಗೆಗೆ ಏರಿಸಿದ ಉದಾಹರಣೆಗಳೂ ಇವೆಯಲ್ಲಾ?

ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪತ್ರ ನೀಡಿದ್ದು ಜೀವ ಭಯದಿಂದ ಅಲ್ಲ -ಸಾತ್ಯಕಿ ಸಾವರ್ಕರ್, ಸಾವರ್ಕರ್ ಮರಿಮೊಮ್ಮಗ
ಜೀವ ಭಯದಿಂದಾಗಿದ್ದರೆ ಕ್ಷಮಿಸಬಹುದಿತ್ತು.

ಮತಾಂಧ ಶಕ್ತಿಗಳನ್ನು ಮಣಿಸುವ ಶಕ್ತಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಅವುಗಳ ಕೈಯಲ್ಲೇ ಅಧಿಕಾರ ಇದೆಯಲ್ಲ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...