ಪುನೀತ್‌ ರಾಜ್‌ಕುಮಾರ್‌ರನ್ನು ಅವಮಾನಿಸಿದ ಚಕ್ರವರ್ತಿ ಸೂಲಿಬೆಲೆ: ಆಕ್ರೋಶದ ಬಳಿಕ ಕ್ಷಮೆಯಾಚನೆ

Update: 2022-08-01 12:48 GMT

ಬೆಂಗಳೂರು, ಆ.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಹಂಚಿಕೊಂಡಿದ್ದ ಟ್ವೀಟ್ ಒಂದು ಸದ್ಯ ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು,  ಪುನೀತ್‌ ರಾಜ್‌ಕುಮಾರ್‌ ಅವರನ್ನು ಅವಮಾನಿಸಲಾಗಿದೆ ಎಂದು ಅವರ ಅಭಿಮಾನಿಗಳು ಆರೋಪಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಅವರನ್ನು ಅವಮಾನಿಸಲಾಗಿದೆ ಎನ್ನಲಾದ ಟ್ವೀಟ್ ವಿರುದ್ಧ  ಪುನೀತ್‌ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಕ್ಷಮೆಯಾಚಿಸಿದ್ದಾರೆ. 

' ಫೈಲ್​ಗಳಿಗೆ ಸಹಿ ಮಾಡಲು ಸಿಎಂಗೆ ಸಮಯವಿಲ್ಲ ಎಂದು ನಮ್ಮ ಶಾಸಕರು ​ಹೇಳುತ್ತಿದ್ದಾರೆ.  ಆದರೆ, ಸಿಎಂ ಬೊಮ್ಮಾಯಿ ಅವರು ಎಲ್ಲಾ ಸಿನೆಮಾಗಳ ಪ್ರೀಮಿಯರ್​​ ಶೋ ನೋಡಲು ಹೋಗುತ್ತಿದ್ದಾರೆ. ಹಾಗೂ ಸಿನೆಮಾ ನಟನೊಬ್ಬ ಮೃತಪಟ್ಟಾಗ ಮೂರು ಮೂರು ದಿನ ಅಲ್ಲೇ ಇರಲು ಸಮಯವಿದೆ. ಈಗ ಮಂಗಳೂರಿನಲ್ಲಿ ಕೊಲೆ ನಡೆಯದಿದ್ದರೆ ವಿಕ್ರಾಂತ್​ ರೋಣ ಸಿನೆಮಾ ಕೂಡ ನೋಡುತ್ತಿದ್ದರು' ಎಂದು ಟ್ವೀಟ್ ಮಾಡಿದ್ದರು.


ಪುನೀತ್‌ ಅಭಿಮಾನಿಗಳ ಪ್ರತಿಕ್ರಿಯೆ : 

ಪೊಲಿಟಿಕಲ್ ಅಜೆಂಡಾಗೆ ಅಪ್ಪು ಅವರ ಹೆಸರನ್ನು ಎಳೆದು ತರಬೇಡಿ. ಸಮಾಜದ ಒಳಿತಿಗಾಗಿ ರಾಜಕಾರಣಿಗಳಿಗಿಂತ ಪುನೀತ್ ರಾಜ್‌ಕುಮಾರ್ ಅವರು ಹೆಚ್ಚು ಶ್ರಮಿಸಿದ್ದಾರೆ, ಕೊಡುಗೆ ನೀಡಿದ್ದಾರೆ ಎಂದು ಪುನೀತ್‌ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

-------------------------------------------------------------

'ಪುನೀತ್ ರಾಜ್‌ಕುಮಾರ್ ಬರೀ ನಟ ಅಲ್ಲ. ನಮ್ಮ ಸಾಂಸ್ಕೃತಿಕ ರಾಯಭಾರಿ' ಎಂದು ಇನ್ನೊಬ್ಬ ಪುನೀತ್ ಅಭಿಮಾನಿ ಟ್ವೀಟಿಸಿದ್ದಾರೆ. 

---------------------------------------------------------------

‘’ಪುನೀತ್ ರಾಜ್‌ಕುಮಾರ್ ಅವರು ಚಿಕ್ಕವರಿರುವಾಗಲೇ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದು ಗೊತ್ತಾ? ಕೊರೊನಾ ಸಮಯದಲ್ಲಿ ಸಹಾಯ ಮಾಡಿದ್ದು ನೆನಪಿದ್ಯಾ? ಪುನೀತ್ ಅವರು ಕೇವಲ ನಟ ಮಾತ್ರವಲ್ಲ.. ಎಲ್ಲವನ್ನೂ ಮೀರಿದವರು’’ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ. 

-----------------------------------------------------------------


ಕ್ಷಮೆಯಾಚನೆ: ''ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು'' ಎಂದು ಸೂಲಿಬೆಲೆ ಟ್ವೀಟ್ ಮೂಲಕವೇ ಕ್ಷಮೆಯಾಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News