ಹಾಸನ: ಹಳಿ ದಾಟುವ ವೇಳೆ ಜಾರಿ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ರೈಲು

Update: 2022-08-01 13:37 GMT

ಹಾಸನ : ವಿದ್ಯಾರ್ಥಿನಿ ಓರ್ವಳು ಹಳಿ ದಾಟುವಾಗ ಕಾಲು ಜಾರಿದ ಪರಿಣಾಮ ರೈಲು ಹರಿದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ. 

ಗುಡ್ಡೆ ತೆರಣ್ಯ ಗ್ರಾಮದ ನಿವಾಸಿ ಪ್ರೀತಿ (18) ವರ್ಷ ಎಂಬುವರೆ ರೈಲು ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. 

ಕಾಲೇಜಿಗೆ ತೆರಳುವ ನಿಟ್ಟಿನಲ್ಲಿ ರೈಲು ಹಳಿ ದಾಟುತ್ತಿದ್ದಾಗ ವಿದ್ಯಾರ್ಥಿನಿ  ಕಾಲು ಜಾರಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ರೈಲಿನ ಎಂಜಿನ್ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಸಾವನಪ್ಪಿದ ವಿಚಾರ ಹಬ್ಬುತ್ತಿದ್ದಂತೆ ಮೊಸಳೆ ಹೊಸಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಜಮಾಯಿಸಿ ರಸ್ತೆ ತಡೆ ಮಾಡಿದಲ್ಲದೇ ಟೈರಿಗೆ ಬೆಂಕಿ ಹಾಕಿ ಪ್ರತಿಭಟಿಸಿದ್ದಾರೆ. ತಕ್ಷಣ ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡಲು ಆಗ್ರಹಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.

ಕಳೆದ ಹಲವು ವರ್ಷಗಳಿಂದ ಮೊಸಳೆಹೊಸಳ್ಳಿ ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರೂ ಕೂಡ ರೈಲ್ವೆ ಇಲಾಖೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಜೀವತೆತ್ತಬೇಕಾಗಿದೆ ಎಂದು ಆರೋಪಿಸಿ ನೂರಾರು ಮಂದಿ ಪ್ರತಿಭಟನಾಕಾರರು ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ, ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಶಾಶ್ವತ ಪರಿಹಾರ ಮಾಡಿಕೊಡಬೇಕು. ಈ ರೀತಿ ಅಮಾಯಕ ಜನರನ್ನು ಬಲಿ ಪಡೆದುಕೊಳ್ಳುತ್ತಿದ್ದೇವೆ. ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಸ್ಥಳಕ್ಕೆ ಬಂದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಮಸ್ಯೆ ಆಲಿಸಿದರು.

ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ. 

ಈ ಕುರಿತು  ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಧ್ಯಮದವರಿಗೆ ಮಾಹಿತಿ ನೀಡಿ, ಈಗಾಗಲೇ ರೈಲ್ವೆ ಮೆಲು ಸೇತುವೆಗೆ ಸಿದ್ಧವಾಗಿದ್ದು, ಸಲ್ಪ ತಾಂತ್ರಿಕ ತೊಂದರೆ ಆಗಿರುವುದಾಗಿ ಹೇಳಿದರು. ಅಪಘಾತದ ವೇಳೆ ಮೃತ ಕುಟುಂಬಕ್ಕೆ ಪರಿಹಾರ ಮತ್ತು ಸ್ಥಳಕ್ಕೆ ಸ್ಥಲೀಯ ಶಾಸಕರು ಬರಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News