×
Ad

ಕೋಮು ಸಾಮರಸ್ಯ ಕದಡಲು ಸರಕಾರದ್ದೆ ದೊಡ್ಡ ಪಾತ್ರ: ಸಿಜೆ, ರಾಜ್ಯಪಾಲರಿಗೆ ಎನ್.ಹನುಮೇಗೌಡ ದೂರು

Update: 2022-08-01 19:42 IST
ಎನ್.ಹನುಮೇಗೌಡ - ಸಾಮಾಜಿಕ ಕಾರ್ಯಕರ್ತ 

ಬೆಂಗಳೂರು, ಆ. 1: ‘ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಸರಕಾರದ್ದೆ ದೊಡ್ಡ ಪಾತ್ರ ಇರುವಂತೆ ಕಂಡುಬರುತ್ತಿದೆ. ನೀತಿ-ನಿಯಮಗಳನ್ನು ಗಾಳಿಗೆ ತೂರಿ ಒಂದು ಸಮುದಾಯದವರಿಗೆ ಅಸಂವಿಧಾನಿಕವಾಗಿ ಪರಿಹಾರ ವಿತರಣೆ ಮಾಡಲಾಗಿದ್ದು, ಇದರ ವಿರುದ್ಧ ಕೂಡಲೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಅವರು, ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

‘ಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜಾತಿ ಮತ್ತು ಧರ್ಮಗಳ ನಡುವೆ ಅಸಹಿಷ್ಣುತೆ ಸೃಷ್ಟಿಸುತ್ತಿದ್ದಾರೆ. ದ್ವೇಷ, ಅಸೂಯೆ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಒಂದು ಸಮುದಾಯದ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಿ, ಮತ್ತೊಂದು ಸಮುದಾಯದ ಕುಟುಂಬಗಳಿಗೆ ಪರಿಹಾರ ನೀಡದಿರುವುದು ಉಲ್ಲೇಖನೀಯ' ಎಂದು ಅವರು ತಿಳಿಸಿದ್ದಾರೆ.

‘ಗೃಹ ಸಚಿವರ ನಿವಾಸಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಈ ವರೆಗೂ ಯಾವುದೇ ದೂರು ದಾಖಲಿಸಿಲ್ಲ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ‘ಕೊಲೆಪಾತಕರನ್ನು ಏನ್‍ಕೌಂಟರ್ ಮಾಡಲು ಸರಕಾರ ಸಿದ್ಧವಿದೆ' ಎಂದು ಹೇಳಿಕೆ ನೀಡಿರುವುದು ಅಧಿಕಾರ ದುರ್ಬಳಕೆಯಾಗಿದೆ. ಇದೇ ವೇಳೆ ಕಾವಿದಾರಿ ಸ್ವಾಮಿಯೊಬ್ಬರು ‘ಇನ್ನೂ 8-10 ಹತ್ಯೆ ಮಾಡಲಿದ್ದೇವೆ' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಬೇಕು' ಎಂದು ಆಗ್ರಹಿಸಿ ಹನುಮೇಗೌಡ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News