ಆನ್‍ಲೈನ್ ಮತದಾನ ವ್ಯವಸ್ಥೆ ಜಾರಿಗೆ ಕುರುಬೂರು ಶಾಂತಕುಮಾರ್ ಆಗ್ರಹ

Update: 2022-08-01 14:15 GMT

ಬೆಂಗಳೂರು, ಆ.1: ಚುನಾವಣೆಯಲ್ಲಿ ಆನ್‍ಲೈನ್ ಮೂಲಕ ಮತದಾನ ಮಾಡುವಂತ ವ್ಯವಸ್ಥೆ ಜಾರಿಗೆ ಬರಲಿ. ಆಧಾರ್ ಕಾರ್ಡ್ ಲಿಂಕ್ ಮಾಡಿರುವುದರಿಂದ ಮತದಾರರು ಇದ್ದಲ್ಲಿಯೇ ಮತದಾನ ಮಾಡುವಂತಾದರೆ ಹೆಚ್ಚು ಮತದಾನವಾಗುತ್ತದೆ. ಈ ಕ್ರಮ ಚುನಾವಣಾ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಒಬ್ಬ ಅಭ್ಯರ್ಥಿ ಒಂದೆ ಕ್ಷೇತ್ರದಲ್ಲಿ ನಿಲ್ಲುವಂತಾಗಬೇಕು. ರಾಜಕೀಯ ಪಕ್ಷಗಳು ಆ ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷಗಳು ಸೇವೆ ಸಲ್ಲಿಸಿರುವ ಜನರನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸಲು ಬಿ.ಫಾರಂ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಪ್ರತಿನಿಧಿ ಅನಾವಶ್ಯಕವಾಗಿ ರಾಜೀನಾಮೆ ನೀಡಿ, ಪದತ್ಯಾಗ ಮಾಡಿ, ಮತ್ತೊಂದು ಚುನಾವಣೆಗೆ ಅವಕಾಶ ಮಾಡಿದರೆ, ಸರಕಾರದ ಹಣ ವ್ಯರ್ಥವಾಗಿ ವೆಚ್ಚವಾಗುವ ಕಾರಣ, ಆ ಹಣವನ್ನು ಸಂಬಂಧಿಸಿದ ವ್ಯಕ್ತಿಯಿಂದ ಸರಕಾರ ವಸೂಲಿ ಮಾಡಬೇಕು ಅಥವಾ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಂತಹ ವ್ಯಕ್ತಿಯನ್ನು 10 ವರ್ಷಗಳು ಚುನಾವಣೆಯಿಂದ ನಿಷೇಧ ವಿಧಿಸಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಚುನಾವಣೆಯಲ್ಲಿ ಮತ ಪಡೆಯಲು ಅಕ್ರಮವಾಗಿ ಹಣ ಅಥವಾ ವಸ್ತುಗಳನ್ನು ಹಂಚುವ ಯಾವುದೆ ಪಕ್ಷದ ಅಧಿಕೃತ ಕಾರ್ಯಕರ್ತರು ಹಂಚುವಾಗ ಸಿಕ್ಕಿಬಿದ್ದಲ್ಲಿ ಅಂತಹ ಅಭ್ಯರ್ಥಿಯ ಚುನಾವಣಾ ಫಲಿತಾಂಶ ತಡೆ ಹಿಡಿಯಬೇಕು. ನೋಟಾ ಮತದಾನಕ್ಕೆ ಮೌಲ್ಯ ನಿಗಧಿ ಮಾಡಿ ಗೆಲುವಿನ ಅಂತರ ಕಡಿಮೆ ಇದ್ದಲ್ಲಿ ನೋಟಾ ಮತದಾನಕ್ಕೆ ಹೆಚ್ಚು ಮತ ಬಂದಿದ್ದರೆ ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News