ಅರ್ಹರಿಂದ ಅರ್ಜಿ ಬಾರದಿದ್ದರೆ ಮಹಿಳಾ ಮೀಸಲು ಹುದ್ದೆ ಪುರುಷರಿಗೆ: ಹೈಕೋರ್ಟ್

Update: 2022-08-01 14:47 GMT

ಬೆಂಗಳೂರು, ಆ.1: ಬ್ಯಾಕ್‍ಲಾಗ್ ಮಹಿಳಾ ಮೀಸಲು ವರ್ಗದ ಹುದ್ದೆಗಳಿಗೆ ಅರ್ಹರು ಸಿಗದಿದ್ದರೆ ಆ ಹುದ್ದೆಗಳಿಗೆ ಅದೇ ಪ್ರವರ್ಗದ ಅರ್ಹ ಪುರುಷರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಆದೇಶಿಸಿದೆ. 

ಬೆಂಗಳೂರು ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‍ಟಿ ಮಹಿಳಾ ವರ್ಗಕ್ಕೆ ಮೀಸಲಾದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ನೇಮಕ ಮಾಡುವಂತೆ ದ್ಯಾವಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ರಾಜ್ಯ 2002ರ ನ.22ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಹೇಳಿರುವಂತೆ ಬೆಂಗಳೂರು ವಿವಿಯು ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‍ಟಿ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪ್ರಕ್ರಿಯೆ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ. 

ಬೆಂವಿವಿ 2011ರ ಮಾ.21ರಂದು ಮುಕ್ತ ಕೆಟಗರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ, ಎಸ್‍ಟಿ ಮಹಿಳೆಯರ ವರ್ಗದಲ್ಲಿ ಯಾವ ಅಭ್ಯರ್ಥಿ ಆಯ್ಕೆಗೆ ಅರ್ಜಿ ಸಲ್ಲಿಸದ ಕಾರಣ ಆ ಹುದ್ದೆ ಭರ್ತಿ ಆಗಿರಲಿಲ್ಲ. ಆ ವಿಷಯ ತಿಳಿದ ಅರ್ಜಿದಾರರು, ಎಸ್‍ಟಿ ಮಹಿಳಾ ವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದರು. 2002 ನ.22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲೇಖಿಸಿದ್ದರು. ಅವರ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News