ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆಯಿಂದ ‘ನಕಲಿ ಮತದಾನ' ತಪ್ಪಲಿದೆ: ಸರಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ

Update: 2022-08-01 15:46 GMT
 ವಂದಿತಾ ಶರ್ಮಾ -ಸರಕಾರದ ಮುಖ್ಯಕಾರ್ಯದರ್ಶಿ

ಬೆಂಗಳೂರು, ಆ. 1: ‘ಜನಸಾಮಾನ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ ಚುನಾವಣಾ ಆಯೋಗವು ಚುನಾವಣಾ ಸುಧಾರಣೆ ಜಾರಿಗೆ ತಂದಿದ್ದು, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಿಂದ ನಕಲಿ ಮತದಾನ ತಪ್ಪಲಿದೆ' ಎಂದು ಸರಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿ ಸಮ್ಮೇಳನ ಸಭಾಂಗಣದಲ್ಲಿ ಚುನಾವಣಾ ಆಯೋಗದಿಂದ ಏರ್ಪಡಿಸಿದ್ದ ‘ಚುನಾವಣಾ ಸುಧಾರಣೆಗಳು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಚುನಾವಣಾ ಸುಧಾರಣೆಗಳ ಕುರಿತು ರಾಜ್ಯದ ಜನತೆಗೆ ಅರಿವು ಮೂಡಿಸಬೇಕು. ಸುಧಾರಣೆಗಳನ್ನು ಕಾರ್ಯಗತಗೊಳಿಸಿದರೆ ನಮ್ಮ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ' ಎಂದು ತಿಳಿಸಿದರು.

‘ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಮೊದಲು ಸರಕಾರಿ ನೌಕರರಾದ ನಾವು ಮತದಾರರ ಪಟ್ಟಿಯಲ್ಲಿ ಮೊದಲು ಹೆಸರು ನಮೂದಿಸಬೇಕು. ನಂತರ ರಾಜ್ಯದ ಜನತೆಗೆ ಪ್ರಚಾರ ಮಾಡಬೇಕು. ಆಧಾರ್ ಸಂಖ್ಯೆ ಜೋಡಣೆಯಾದರೆ ಯಾವುದೇ ವ್ಯಕ್ತಿಯ ಮತವನ್ನು ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಮತದಾನ ನಮ್ಮ ಕರ್ತವ್ಯವಾಗಿದ್ದು, ಮತದಾನ ಮಾಡಲು ಎಲ್ಲರೂ ಪ್ರೇರಣೆ ನೀಡಬೇಕು' ಎಂದು ಅವರು ಸಲಹೆ ನೀಡಿದರು.

‘ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮನೆ ಮನೆ ಪ್ರಚಾರವನ್ನು ಮಾಡಬೇಕು. ಮೊದಲಿಗೆ ಕರ್ನಾಟಕ ರಾಜ್ಯದಲ್ಲೇ ಚುನಾವಣೆ ಬರಲಿದ್ದು, ದೇಶದಲ್ಲೆ ಚುನಾವಣೆ ಸುಧಾರಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕು' ಎಂದ ಅವರು, ‘ಮಾಹಿತಿ ತಂತ್ರಜ್ಞಾನ(ಐಟಿ-ಬಿಟಿ)ಕ್ಕೆ ಹೆಸರಾಗಿರುವ ಬೆಂಗಳೂರು ತಾಂತ್ರಿಕತೆಯಲ್ಲಿಯೂ ಮುನ್ನುಡೆ ಸಾಧಿಸಬೇಕು' ಎಂದು ತಿಳಿಸಿದರು.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ‘ಚುನಾವಣಾ ಸುಧಾರಣೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಮೊದಲಿನಂತೆ ಜನವರಿ 1ರವರೆಗೂ ಹಾಗೂ 18 ವರ್ಷ ತುಂಬಿದ ನಂತರ ಸೇರ್ಪಡೆ ಮಾಡಲು ಕಾಯುವಂತಿಲ್ಲ. 17ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ' ಎಂದು ಹೇಳಿದರು.

‘ಆ.1ರಿಂದ ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ಲಭ್ಯವಿದ್ದು, ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ಹೊಸ ನಮೂನೆ 8 ಲಭ್ಯವಿದೆ. ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತ ಆಧಾರ್ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ. ಒಂದೇ ತರಹದ ಹೆಸರು-ಫೋಟೋ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಖಾತರಿಪಡಿಸುವ ಉದ್ದೇಶದಿಂದ ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆಯನ್ನು ಆಗಸ್ಟ್ ತಿಂಗಳಿಂದ ಪ್ರಾರಂಭಿಸಲಾಗುವುದು' ಎಂದು ಹೇಳಿದರು.

‘ಈ ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ ನಮೂನೆ-6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ಚಾಲ್ತಿಯಲ್ಲಿರುವ ನಮೂನೆ-7ನ್ನು ಪರಿಷ್ಕರಿಸಲಾಗಿದೆ. ಇದರಿಂದ ಮರಣ, 18 ವರ್ಷ ಆಗದಿರುವುದು, ಈಗಾಗಲೇ ಬೇರೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತ್ತು ಭಾರತದ ಪ್ರಜೆಯಲ್ಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯಲು ನಮೂನೆ-7ರಲ್ಲಿ ಅವಕಾಶ ಕಲ್ಪಿಸಿ ಪರಿಷ್ಕರಿಸಲಾಗಿದೆ. 

ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಣದ ಉದ್ದೇಶದಿಂದ ಹೊಸದಾಗಿ ನಮೂನೆ-6ಬಿ ಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಿದ್ದು, ಅಕಸ್ಮಾತ್ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಂದೆ ಸೂಚಿಸಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ಆ. 1ರಿಂದ 2023ರ ಮಾರ್ಚ್ 31ರೊಳಗೆ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ನಮೂನೆ-6ಬಿಯಲ್ಲಿ ಮಾಹಿತಿ ದೃಢೀಕರಿಸಲು ಆನ್‍ಲೈನ್ ಮತ್ತು ಆಫ್‍ಲೈನ್ ಎರಡರಲ್ಲೂ ಅವಕಾಶವಿದೆ.  ಆನ್‍ಲೈನ್ ವ್ಯವಸ್ಥೆಯಡಿ ಎನ್‍ವಿಎಸ್‍ಪಿ ಮತ್ತು ವೋಟರ್ ಹೆಲ್ಪ್‍ಲೈನ್ ಆ್ಯಪ್‍ನಲ್ಲಿ ಮತದಾರರು ಮಾಹಿತಿಯನ್ನು ದೃಢೀಕರಿಸಲು ಅವಕಾಶವಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್‍ಗೆ ಸ್ವೀಕೃತವಾಗುವ ಒಟಿಪಿ ಸೌಲಭ್ಯವನ್ನು ಒದಗಿಸಿದೆ. ಅಕಸ್ಮಾತ್ ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದಲ್ಲಿ ಮತದಾರರು ಆಧಾರ್ ಅನ್ನು ಮೇಲಿನ ಆ್ಯಪ್‍ಗಳಲ್ಲಿ ಅಪ್‍ಲೋಡ್ ಮಾಡಿ ಅರ್ಜಿ ಸಲ್ಲಿಸಬಹದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿಗಳಾದ ಶಂಭು ಭಟ್ ವೋಟರ್ ಹೆಲ್‍ಲೈನ್ ಆ್ಯಪ್ ಬಿಡುಗಡೆ ಮಾಡಿದರು. ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹಿರಿಯ ಅಧಿಕಾರಿ ಕರಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

-ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆಗೆ ನಮೂನೆ-6 ಬಿ

-ಹೊಸ ಮತದಾರರ ನೋಂದಣಿಗೆ ನಮೂನೆ-6

-ಮತದಾರರ ಪಟ್ಟಿಯಲ್ಲಿನ ಮಾಹಿತಿ ತಿದ್ದುಪಡಿಗೆ ನಮೂನೆ-8

-ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7

-18 ವರ್ಷ ಪೂರೈಸುವವರಿದ್ದರೆ ಹೆಸರು ನೋಂದಣಿಗೆ ಜನವರಿ 1, ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂದು ನಾಲ್ಕು ಅವಕಾಶ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News