ಮಾಜಿ ಸಿಎಂ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ: 5 ಮಂದಿ ಪೊಲೀಸರಿಗೆ ಗಾಯ

Update: 2022-08-02 06:50 GMT

ತುಮಕೂರು: ಮಂಗಳೂರು ಭೇಟಿ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿ 5 ಮಂದಿ ಪೊಲೀಸ್​ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ. 

ಕುಣಿಗಲ್ ಸಮೀಪದ ತಿಪ್ಪೂರು ಗೇಟ್ ಬಳಿ ಸೋಮವಾರ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಘಟನೆ ನಡೆದಿದೆ. ಬೆಂಗಾವಲು ವಾಹನ ರಸ್ತೆ ವಿಭಜಕಕ್ಕೆ ಗುದ್ದಿ ರಸ್ತೆಯಿಂದಾಚೆಗೆ ನುಗ್ಗಿದೆ. ಪರಿಣಾಮ  ವಾಹನದಲ್ಲಿದ್ದ  ಪೊಲೀಸ್ ಸಿಬ್ಬಂದಿಗಳಾದ ಮಹೇಶ್ , ಮಂಜುನಾಥ್ ತೀವ್ರ ವಾಗಿ ಗಾಯಗೊಂಡಿದ್ದು ಜಗದೀಶ್, ಆನಂದ್, ಹರೀಶ್ ಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಕುಮಾರಸ್ವಾಮಿ ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮತ್ತು ಮಸೂದ್ ಹಾಗೂ  ಸುರತ್ಕಲ್​ನ ಪಾಝಿಲ್ ಅವರ ಕುಟುಂಬಸ್ಥರನ್ನು  ಭೇಟಿ ಮಾಡಿ ಹೆಲಿಕಾಪ್ಟರ್​ನಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದರು. ಮಾಜಿ ಮುಖ್ಯಮಂತ್ರಿಯ ಬೆಂಗಾವಲು ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 

ಅಮೃತೂರು ಸರ್ಕಲ್ ಇನ್​ಸ್ಪೆಕ್ಟರ್ ಅರುಣ್ ಸಾಲಂಕೆ ಮತ್ತು ಪಿಎಸ್​ಐ ಮಂಗಳಗೌರಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News