×
Ad

ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ವಿರೋಧ

Update: 2022-08-02 13:10 IST
ತೇಜಸ್ವಿನಿ ಅನಂತ್ ಕುಮಾರ್

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ವಿಚಾರದ ಕುರಿತು ಈಗಾಗಲೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದೆ. ಸರಕಾರ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾದ ಮೊಟ್ಟೆ ನೀಡಲು ಪ್ರಾರಂಭಿಸಿದೆ. ಈ ಬಗ್ಗೆ ತಮ್ಮದೆ ಪಕ್ಷದ ವಿರುದ್ಧ ತೇಜಸ್ವಿನಿ ಅನಂತ್ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಮೊಟ್ಟೆಯೊಂದೇ ಪೌಷ್ಠಿಕ ಆಹಾರದ ಮೂಲವಲ್ಲ ಎಂದು ಹೇಳಿದ್ದಾರೆ.

ನಮ್ಮ ಸರಕಾರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡುವುದಕ್ಕೆ ಯಾಕೆ ನಿರ್ಧರಿಸಿದೆ? ಎಂದು ಪ್ರಶ್ನಿಸಿದ ಅವರು, ಮೊಟ್ಟೆಯೊಂದೇ ಪೌಷ್ಠಿಕ ಆಹಾರದ ಮೂಲವಲ್ಲ. ಅನೇಕ ಸಸ್ಯಾಹಾರಿ ವಿದ್ಯಾರ್ಥಿಗಳನ್ನು ಇದು ಹೊರಗಿಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುವಂತೆ ನಮ್ಮ ನೀತಿಗಳನ್ನು ರೂಪಿಸಬೇಕು ಎಂದು ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಸರಕಾರದ ವರದಿ ಏನು ಹೇಳುತ್ತದೆ ?

ಸರ್ಕಾರ ನಿಯೋಜಿಸಿದ ವರದಿಯ ಪ್ರಕಾರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳಿಗೆ ಪ್ರತಿಕ್ರಿಯೆ ಅತ್ಯಂತ  ಧನಾತ್ಮಕವಾಗಿದೆ. 7 ಜಿಲ್ಲೆಗಳಲ್ಲಿ ಈ ಪ್ರಾಯೋಗಿಕ ಯೋಜನೆಯು ಮಕ್ಕಳಲ್ಲಿ ಪೌಷ್ಟಿಕಾಂಶ ಮಟ್ಟ ಹಾಗು  ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ಯಾದಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ನೀಡಲಾಗಿದ್ದು, ಮೊಟ್ಟೆಗಳನ್ನು ನೀಡದ ಗದಗದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಯಾದಗಿರಿ ಮಕ್ಕಳ BMI ( ಬಾಡಿ ಮಾಸ್ ಇಂಡೆಕ್ಸ್) ಅಂಶವು  ಸುಧಾರಣೆಯಾಗಿದೆ.

ಬಹುತೇಕ  ವಿದ್ಯಾರ್ಥಿಗಳು ಮೊಟ್ಟೆಗಳನ್ನು ತಿನ್ನಲು ನಿರ್ಧರಿಸಿದ್ದರು ಎಂದು ವರದಿ ಹೇಳುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಕೇವಲ 4.5% ಬಾಲಕಿಯರು ಮತ್ತು 4.1% ಬಾಲಕರು ಮೊಟ್ಟೆ ಬೇಡ ಎಂದಿದ್ದಾರೆ ಮತ್ತು ಬಾಳೆಹಣ್ಣುಗಳನ್ನು ತಿನ್ನಲು ನಿರ್ಧರಿಸಿದ್ದಾರೆ ಎಂದು ಅಧ್ಯಯನವು ಬೆಟ್ಟುಮಾಡಿದೆ.

"40% ವಿದ್ಯಾರ್ಥಿಗಳು ಮೊಟ್ಟೆ ನೀಡಿದ ದಿನಗಳ ಪೈಕಿ 80% ಕ್ಕೂ ಹೆಚ್ಚು ದಿನ ಅದನ್ನು ಸೇವಿಸಿದ್ದರೆ, 44% ವಿದ್ಯಾರ್ಥಿಗಳು 50 ರಿಂದ 80% ದಿನ ಮೊಟ್ಟೆ ಸೇವಿಸಿದ್ದಾರೆ. ಒಟ್ಟಾರೆ  ಸುಮಾರು 83% ವಿದ್ಯಾರ್ಥಿಗಳು ಕನಿಷ್ಠ 50% ದಿನಗಳ ಕಾಲ ಮೊಟ್ಟೆಗಳನ್ನು ಸೇವಿಸಿದ್ದು, ಗದಗ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಯಾದಗಿರಿಯಲ್ಲಿ ಮಕ್ಕಳ ಬೆಳವಣಿಗೆ ಮತ್ತು ಪೋಷಣೆಯ ಮೇಲೆ ಉತ್ತಮ ಪರಿಣಾಮವನ್ನು ತೋರಿಸಿದೆ." ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News