×
Ad

6 ಲಕ್ಷ ಮೈಸೂರು ಪಾಕ್‍, 1500 ಜನ ಬಾಣಸಿಗರು: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಕಲಸಿದ್ಧತೆ

Update: 2022-08-02 18:02 IST

ದಾವಣಗೆರೆ,ಆ.2: ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಮನೂರು ಆರಮನೆ ಮೈದಾನದಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವ  ಕಾರ್ಯಕ್ರಮಕ್ಕೆ ಸಕಲಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ  ಮಾಹಿತಿ ನೀಡಿದರು.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಮಾರು 50 ಎಕರೆ ಪ್ರದೇಶದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧಡೆಯಿಂದ ಸುಮಾರು 6-7 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಕುಳಿತುಕೊಳ್ಳಲು ಸುಮಾರು 4 ಲಕ್ಷ ಅಸನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಗಸ್ಟ್ 3 ರಂದು  ಬೆಳಿಗ್ಗೆ 10 ಗಂಟೆಗೆ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ ಹಾಗೂ ಸಂಗೀತ ಕಟ್ಟಿ ಇವರುಗಳು ನೃತ್ಯರೂಪಕ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 11.30ಕ್ಕೆ ಪಕ್ಷದ ಹಿರಿಯ ಮುಖಂಡರು ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುವರು ಎಂದು ವಿವರಿಸಿದರು.   

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ  ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ, ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಡಾ. ಜಿ.ಪರಮೇಶ್ವರ್, ವೀರಪ್ಪ ಮೊಯ್ಲಿ, ಆರ್.ವಿ.ದೇಶಪಾಂಡೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಶಾಸಕರು, ವಿಧಾನಪರಿಷತ್ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಜಿಲ್ಲಾಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದೆ ಎಂದರು

ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ನಾಲ್ಕು ದಿಕ್ಕುಗಳಿಂದ ಸಾವಿರಾರು ಬಸ್, ಕ್ಲೂಸರ್, ಕಾರು ಹಾಗೂ ದ್ವಿಚಕ್ರ ವಾಹನಗಳು ದಾವಣಗೆರೆ ನಗರಕ್ಕೆ ಬರಲಿದ್ದು, ಸುಮಾರು 300 ಎಕರೆ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಒಂದೊಂದು ವಾಹನಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಜನತೆಯ ಊಟದ ವ್ಯವಸ್ಥೆಗೆ ಈಗಾಗಲೇ 1500 ಜನ ಬಾಣಸಿಗರು ನಗರಕ್ಕೆ ಆಗಮಿಸಿದ್ದು, 6 ಲಕ್ಷ ಮೈಸೂರು ಪಾಕ್‍ಗಳನ್ನು ತಯಾರಿಸಲಾಗಿದೆ. 4 ಕೌಂಟರ್ ಗಳಲ್ಲಿ ಪಲಾವ್ ಹಾಗೂ ಮೊಸರನ್ನ ಬಫೆ ಊಟದ ವ್ಯವಸ್ಥೆ ಮಾಡಲಾಗಿದ್ದು ಇದಕ್ಕಾಗಿ ಸ್ವಯಂ ಸೇವಕ ಯುವಪಡೆ ನಿಯೋಜನೆಗೊಂಡಿದೆ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ನಾಡಗೌಡರು, ಮಾಜಿ ಶಾಸಕ ಅಶೋಕ್ ಪಟ್ಟಣ್ಣನವರ್, ಕೆ.ಎಂ.ರಾಮಚಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್. ಪ್ರಕಾಶ್ ರಾಥೋಡ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ಬಣ್ಣ, ಶ್ರೀಶೈಲ ದಳವಾಯಿ, ರಾಜ್‍ಕುಮಾರ್, ಎಂ.ಟಿ.ಸುಭಾಶ್ಚಂದ್ರ ಹಲವರು ಉಪಸ್ಥಿತರಿದ್ದರು.  


 ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವ ಅಭಿಮಾನಿಗಳಿಗೆ ದೊಡ್ಡ ಹಬ್ವವೇ ಆಗಿದೆ.  

ನಗರ ಮತ್ತು ಹೊರ ವಲಯದಲ್ಲಿ ಕಾಂಗ್ರೆಸ್ ಬಂಟಿಂಗ್‍ಗಳು, ಪೋಸ್ಟರ್, ಬ್ಯಾನರ್‍ಗಳ ಆರ್ಭಟ ಜೋರಾಗಿದೆ. ಎಲ್ಲಿ ನೋಡಿದರಲ್ಲಿ ಸಿದ್ದರಾಮಯ್ಯ ಅವರದೊಂದಿಗಿನ ಭಾವಚಿತ್ರವಿರುವ ಬ್ಯಾನರ್‍ಗಳಲ್ಲಿ ಅವರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸ್ವಾಗತ ಕೋರುತ್ತಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದ್ದು, ಅಭಿಮಾನಿಗಳಿಗೆ ಊಟ ಮತ್ತು ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ.

ಘಮಘಮಿಸುತ್ತಿದೆ ಮೈಸೂರ್ ಪಾಕ್

ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್‍ನಲ್ಲಿ ಅಮೃತ ಮಹೋತ್ಸವಕ್ಕೆ ಕಾರ್ಯಕ್ರಮಕ್ಕಾಗಿ ಸುಮಾರು ಆರು ಲಕ್ಷ ಮೈಸೂರು ಪಾಕ್ ತಯಾರು ಮಾಡಲಾಗುತ್ತಿದೆ.  ತಯಾರಾದ ಮೈಸೂರ್ ಪಾಕ್‍ಅನ್ನು ಸುರಕ್ಷಿತವಾಗಿ ರಟ್ಟಿನ ಬಾಕ್ಸ್‍ನಲ್ಲಿ ಹಾಕಿ ಪ್ಯಾಕ್ ಮಾಡಲಾಗಿದೆ. ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಮೈಸೂರು ಪಾಕ್‍ನೊಂದಿಗೆ ಬಿಸಿ ಬೇಳೆಬಾತ್, ಪಲಾವ್, ಮೊಸರು ಬಜ್ಜಿ, ಮೊಸರನ್ನ ಕೊಡಲಾಗುವುದು. ಆಗಸ್ಟ್ 2ರೊಳಗೆ ಮೈಸೂರ್ ಪಾಕ್ ಸಿದ್ಧಪಡಿಸಿ ಬಳಿಕ ಊಟದ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನರು ಅಡಿಗೆ ಬಾಣಿಸಿಗರು ಹಾಗೂ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಮೂರು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೊಂದು ಕಡೆ 170 ಕೌಂಟರ್ ಗಳಿವೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ದಿನ ಬೆಳಗ್ಗೆ 9 ಗಂಟೆಯಿಂದಲೇ ಊಟದ ವ್ಯವಸ್ಥೆ ಪ್ರಾರಂಭವಾಗಲಿದೆ. ಸದ್ಯಕ್ಕೆ ಆರು ಲಕ್ಷ ಜನರಿಗೆ ಊಟಕ್ಕೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರನ್ನು ನೋಡಿಕೊಂಡು ಮತ್ತಷ್ಟು ಅಡುಗೆ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.

ಬೃಹತ್ ವೇದಿಕೆ-ಎಲ್‍ಇಡಿ ಸ್ಕ್ರೀನ್: ಸುಮಾರು 50 ಎಕರೆ ಪ್ರದೇಶದಲ್ಲಿ 200*50 ಅಡಿ ಬೃಹತ್ ವೇದಿಕೆ ಸಿದ್ದವಾಗಿದೆ. ರಾಜ್ಯ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ವಿವಿಐಪಿಗಳು, ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 4 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ ಸಮೀಪದಿಂದಲೇ ಕಾರ್ಯಕ್ರಮ ವೀಕ್ಷಿಸಲು ದೊಡ್ಡ ಎಲ್‍ಇಡಿ ಸ್ಕ್ರೀನ್ ಹಾಕಲಾಗಿದೆ.

''ದಾವಣಗೆರೆ ಅದೃಷ್ಟದ ಸ್ಥಳ''

ರಾಜಕೀಯ ಪಕ್ಷಗಳಿಗೆ ದಾವಣಗೆರೆ ಅದೃಷ್ಟದ ಸ್ಥಳ ಎಂದೇ ಹೇಳಲಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಒಂದಲ್ಲಾ ಒಂದು ಕಾರಣದಿಂದ ದಾವಣಗೆರೆಯಿಂದಲೇ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತವೆ. ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನ ಆಚರಣೆ ಹಾಗು ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಅನ್ನುವುದು ಸಿದ್ದರಾಮಯ್ಯ ಅಭಿಮನಿಗಳ ಮಾತು.

ಕಾಂಗ್ರೆಸ್ ಮುಖಂಡರಾದ ಬಸವರಾಜ ರಾಯರೆಡ್ಡಿ, ಹೆಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ಡಾ. ಜಯಮಾಲಾ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್,  ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾಜಿ ಸಚಿವರಾದ ಹೆಚ್. ಆಂಜನೇಯ, ಎಸ್.ಎಸ್. ಮಲ್ಲಿಕಾರ್ಜುನ್,  ಭೈರತಿ ಸುರೇಶ್ ಇನ್ನೂ ಹಲವರು ಜುಲೈ 10ರಂದು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಸುಮಾರು 50 ಎಕರೆ ವಿಸ್ತೀರ್ಣದ ಶಾಮನೂರು ಆರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ ಮಾಡಿದರು. ಅಲ್ಲಿಂದ ಆರಂಭವಾದ ಸಿದ್ಧತಾ ಕೆಲಸ ನಡೆದಿದೆ.

ಲಕ್ಷಾಂತರ ಜನರು ಭಾಗವಹಿಸುವ ಕಾರ್ಯಕ್ರಮ ಇದಾಗಿರುವುದರಿಂದ ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಮುತೂವರ್ಜಿಯಿಂದ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News