ಶ್ರೀಲಂಕಾ ಪ್ರಜೆಗಳ ಅಕ್ರಮ ಬಂಧನ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.2: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿರುವ ಪ್ರಕರಣದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‍ಎಲ್‍ಎಸ್‍ಎ) ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಗೃಹ ಸಚಿವಾಲಯ, ರಾಷ್ಟ್ರೀಯ ತನಿಖಾ ದಳ(ಎನ್‍ಐಎ), ರಾಜ್ಯ ಗೃಹ ಇಲಾಖೆ, ಮಂಗಳೂರು ದಕ್ಷಿಣ ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಶ್ರೀಲಂಕಾದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ತನಕ ಅವರನ್ನು ಕಾರಾಗೃಹದ ಬದಲು ಬೇರೆ ಕಡೆ ಇರಿಸಲು ರಾಜ್ಯದಲ್ಲಿ ಮೂಲಸೌಕರ್ಯ ಹೊಂದಿರುವ ಬಂಧನ ಕೇಂದ್ರ ಸ್ಥಾಪನೆ ಮಾಡಲು ಮತ್ತು ಹೈಕೋರ್ಟ್ ನಿಗದಿಪಡಿಸಿದ ಕಾಲಮಿತಿಯಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ನಿರ್ದೇಶಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಮಂಗಳೂರಿನ ಸೀಪೋರ್ಟ್ ಅತಿಥಿ ಗೃಹದಲ್ಲಿ ಶ್ರೀಲಂಕಾದ 25 ಪ್ರಜೆಗಳು ಪಾಸ್‍ಪೋರ್ಟ್ ಮತ್ತಿತರ ದಾಖಲೆಗಳಿಲ್ಲದೇ ಹಲವು ದಿನಗಳಿಂದ ವಾಸವಾಗಿದ್ದಾರೆ ಎಂಬ ಮಾಹಿತಿ ಆಧರಿಸಿ ಮಂಗಳೂರು ದಕ್ಷಿಣ ಪೊಲೀಸರು 2021ರ ಜೂ.10ರಂದು ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‍ಗಳು, ಪಾಸ್‍ಪೋರ್ಟ್ ಕಾಯಿದೆ, ವಿದೇಶಿಯರ ಕಾಯಿದೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಇತ್ತೀಚೆಗೆ ಪರಪ್ಪನ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಫ್‍ಐಆರ್ ದಾಖಲಿಸಿದ್ದ 25 ಮಂದಿ ಸೇರಿ ಒಟ್ಟು 38 ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ಬಂಧಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಇದು ಎನ್‍ಐಎ ವಿಶೇಷ ನ್ಯಾಯಾಲಯದ ಆದೇಶ ಮತ್ತು ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‍ಗೆ ಅರ್ಜಿಯಲ್ಲಿ ತಿಳಿಸಲಾಗಿದೆ.