×
Ad

ಕಸ್ತೂರಿರಂಗನ್ ವರದಿ ಸಮಸ್ಯೆ ಶೀಘ್ರ ಪರಿಹರಿಸದಿದ್ದಲ್ಲಿ ಜನಪ್ರತಿನಿಧಿಗಳಿಗೆ ದಿಗ್ಬಂಧನ: ರೈತಸಂಘ ಎಚ್ಚರಿಕೆ

Update: 2022-08-02 19:26 IST
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರು

ಚಿಕ್ಕಮಗಳೂರು, ಆ.2: 'ಕಸ್ತೂರಿರಂಗನ್ ವರದಿ ಸಮಸ್ಯೆಯನ್ನು ಮುಂದಿನ ಆರು ತಿಂಗಳೊಳಗೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರಗಳು ಅಗತ್ಯ ಕ್ರಮವಹಿಸಬೇಕು. ತಪ್ಪಿದಲ್ಲಿ ಶಾಸಕರು ಮತ್ತು ಸಂಸದರು ಹಳ್ಳಿಗಳಿಗೆ ಬಾರದಂತೆ ದಿಗ್ಬಂಧನ ಹಾಕಲಾಗುವುದು' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6 ತಿಂಗಳೊಳಗೆ ಮನೆ, ಕೃಷಿ ಜಮೀನು ಸಾಗುವಳಿಯನ್ನು ಕಸ್ತೂರಿ ರಂಗನ್ ವರದಿಯಿಂದ ಕೈಬಿಡದಿದ್ದರೆ ಉಗ್ರಹೋರಾಟಕ್ಕೆ ರೈತ ಸಂಘ ಮುಂದಾಗಲಿದೆ. ಕಸ್ತೂರಿರಂಗನ್ ವರದಿಯಲ್ಲಿ ಪಶ್ಚಿಮಘಟ್ಟ ಭಾಗದ ಕೃಷಿ, ತೋಟಗಾರಿಕೆ, ಜನವಸತಿ ಪ್ರದೇಶಗಳನ್ನು ಸೇರಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ಎದ್ದಿದೆ. ಈ ಸಂಬಂಧ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾದ ಜನಪ್ರತಿನಿಧಿಗಳು, ಪಕ್ಷ ರಾಜಕಾರಣ ಮಾಡುತ್ತಾ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ವೈಫಲ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಸಮಪಾಲು ಇದೆ ಎಂದು ಆರೋಪಿಸಿದರು.

ಮಲೆನಾಡಿನ ಗ್ರಾಮಸ್ಥರು, ನಾಗರಿಕರು ಸಂಘ ಸಂಸ್ಥೆಗಳು ವಿರೊಧ ವ್ಯಕ್ತಪಡಿಸಿದಾಗ ಜನಪ್ರತಿನಿಧಿಗಳು, ಸಂಸತ್ ಸದಸ್ಯರು ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವರದಿ ಜಾರಿಯನ್ನು 1 ವರ್ಷಗಳ ಕಾಲ ಮುಂದೂಡಿರುವುದಾಗಿ ಹೇಳುತ್ತಿದ್ದಾರೆ. ಭೌತಿಕ ಸರ್ವೆ ನಡೆಸಲಾಗುವುದು ಎಂದು ಹೇಳುತ್ತಿದ್ದಾರೆ. ಇದು ಮಲೆನಾಡಿನ ಜನರ ಕಣ್ಣೊರೆಸುವ ತಂತ್ರವಾಗಿದ್ದು, ರೊಚ್ಚಿಗೆದ್ದ ಜನರನ್ನು ಸಮಾಧಾನಪಡಿಸುವ ಹುನ್ನಾರವಾಗಿದೆ. ಮಲೆನಾಡಿನ ಜನರ ಬದುಕಿಗೆ ಕೊಡಲಿಪೆಟ್ಟು ನೀಡುವ ಕಸ್ತೂರಿ ರಂಗನ್ ವರದಿಯಿಂದ ಕೃಷಿ, ತೋಟಗಾರಿಕೆ, ಜನವಸತಿ ಪ್ರದೇಶವನ್ನು ಕೈಬಿಡದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪಶ್ಚಿಮಘಟ್ಟ ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ 2010ರಲ್ಲಿ ಪರಿಸರ ತಜ್ಞ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಈ ಸಮಿತಿ 1.66 ಲಕ್ಷ ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ 2011ರಲ್ಲಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ವರದಿಯನ್ನು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಯಿತು. ಈ ಸಮಿತಿ ಉಪಗ್ರಹ ಆಧಾರದ ಮೇಲೆ ಸರ್ವೆ ನಡೆಸಿ 59,945 ಚ.ಕೀ. ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ 2013ರಲ್ಲಿ ವರದಿ ಸಲ್ಲಿಸಿದೆ. ಪಶ್ಚಿಮ ಘಟ್ಟದ 10 ಜಿಲ್ಲೆಗಳ 1576 ಹಳ್ಳಿಗಳ 20668 ಚ.ಕಿಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ವರದಿಯಲ್ಲಿ ತಿಳಿಸಲಾಗಿದೆ. ಈ ಗ್ರಾಮಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು, ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯಗಳ ಅಭಿವೃದ್ಧಿಗೆ ನಿರ್ಬಂಧ ಹೇರಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಾಸಾಯನಿಕ ಬಳಸುವಂತಿಲ್ಲ, ಸಮಿತಿ ಉಲ್ಲೇಖಿಸಿರುವ ಪ್ರಸ್ತಾವಗಳು ಮಲೆನಾಡಿಗರ ಬದುಕನ್ನು ನಿರ್ಬಂಧಿಸುವ ಮತ್ತು ನಾಶಮಾಡುವ ಅಂಶಗಳಿರುವುದರಿಂದ ಯಥಾವತ್ತಾಗಿ ಅಂಗೀಕರಿಸಿದಲ್ಲಿ ನಮ್ಮ ಸ್ವಾವಲಂಬಿ ಬದುಕು ನಾಶವಾಗುವುದಲ್ಲದೆ ಇಲ್ಲಿನ ಜನರ ಮೂಲಭೂತಹಕ್ಕು, ಸ್ವಾತಂತ್ರದ ಹರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಸ್ತೂರಿರಂಗನ್ ಸಮಿತಿ ವರದಿ ಆಧಾರದ ಮೇಲೆ 2014ರ ಮಾ.10ರಂದು ಮೊದರ ಬಾರಿಗೆ ಪರಿಸರ ಸೂಕ್ಷ್ಮಪ್ರದೇಶ ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈಗ 5ನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಹೊರಡಿಸುವ ಮೂಲಕ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಸಂಸದರ ಸಭೆಯನ್ನು ಕರೆಯಲಾಗಿದ್ದು, ಈ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸಂಸದರು ಸಭೆಯಲ್ಲಿ ಭಾಗವಹಿಸಿರಲಿಲ್ಲವೆಂದು ಆರೋಪಿಸಿದರು.

ಮೀಸಲು ಅರಣ್ಯ, ಅಭಯಾರಣ್ಯ, ಕಾಯ್ದಿಟ್ಟ ಅರಣ್ಯ, 1980ರ ಅರಣ್ಯ ಸಂರಕ್ಷಣಾ ಕಾಯ್ದೆ, ಡೀಮ್ಡ್ ಅರಣ್ಯ, ಹುಲಿಯೋಜನೆ, ಆನೆಕಾರಿಡಾರ್, ಕುವೆಂಪು ಜೈವಿಕ ಉದ್ಯಾನವನ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೀಗೆ ಅರಣ್ಯದ ಹೆಸರಿನಲ್ಲಿ ಮಲೆನಾಡಿನ ಜನರ ಬದುಕು ಕಿತ್ತುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಐದನೇ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವನ್ನು ಗೊತ್ತುಪಡಿಸಿದಾಕ್ಷಣ ವಿವಿಧ ಸಂಘಸಂಸ್ಥೆಗಳು ಹೋರಾಟ ರೂಪುರೇಷೆಗಳನ್ನು ಸಿದ್ಧಪಡಿಸಲು ಮುಂದಾಗುತ್ತಿದ್ದಂತೆ ಸರ್ಕಾರಕ್ಕೆ ಜ್ಞಾನೋದಯವಾಗಿ ಪಶ್ಚಿಮಘಟ್ಟದ ಶಾಸಕರು, ಸಂಸದರ ನಿಯೋಗವನ್ನು ಮುಖ್ಯಮಂತ್ರಿಗಳು ದೆಹಲಿಗೆ ಕರೆದೊಯ್ದು ಅರಣ್ಯ ಸಚಿವರ ಬಳಿ ಚರ್ಚಿಸಿದ್ದು, ತಾತ್ಕಲಿಕವಾಗಿ 1 ವರ್ಷ ಮುಂದೂಡಲ್ಪಟ್ಟಿದೆ. ಭೌತಿಕ ಸರ್ವೆ ನಡೆಸಲು ತಿಳಿಸಲಾಗಿದೆ ಎಂದು ಸಂಸದರು ಹೇಳಿಕೆ ನೀಡಿದ್ದಾರೆ. 1 ವರ್ಷ ಕಳೆದ ಬಳಿಕ ಪರಿಸ್ಥಿತಿ ಏನು ಎಂದು ಜನಪ್ರತಿನಿಧಿಗಳನ್ನು ದುಗ್ಗಪ್ಪಗೌಡ ಪ್ರಶ್ನಿಸಿದರು.

ಹಸಿರುಸೇನೆ ಜಿಲ್ಲಾಧ್ಯಕ್ಷ ಅನಂತೇಶ್ ಮಾತನಾಡಿ, ಈ ರೀತಿಯ ಹೊಸ ಯೋಜನೆಗಳನ್ನು ಕೇಂದ್ರ ಸರಕಾರ ಘೋಷಿಸಿದಾಗ ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ನೀಡಬೇಕು. ಆದರೆ ಕಸ್ತೂರಿರಂಗನ್ ವರದಿಯ ಅಂಶಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬಿಡುಗಡೆ ಮಾಡುವಲ್ಲಿ ಸರಕಾರ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.

ಸಂಘದ ಮುಖಂಡರಾದ ನಿರಂಜನ್‍ಮೂರ್ತಿ, ಪಾಶ್ರ್ವನಾಥ, ಸುನಿಲ್, ಅಶೋಕ್, ಸುರೇಶ್, ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News