ಭಾರೀ ಮಳೆಗೆ ಮಂಡ್ಯ ಜಿಲ್ಲೆ ಜನಜೀವನ ಅಸ್ತವ್ಯಸ್ತ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

Update: 2022-08-02 14:15 GMT

ಮಂಡ್ಯ, ಆ.2: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಜನಜೀವನ ಅಸ್ತ್ಯವ್ಯಸ್ತವಾಗಿದೆ. ಕೆರೆಗಳು ತುಂಬಿ ಹರಿದು ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಮತ್ತೊಂದೆಡೆ ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲನಿ ಜಲಾವೃತಗೊಂಡು ನಿವಾಸಿಗಳು ಪರದಾಡುವಂತಾಗಿದೆ. ಉಮ್ಮಡಹಳ್ಳಿಯಲ್ಲಿ ಮನೆ ಕುಸಿದು 36 ಕುರಿಗಳು ಸಾವನ್ನಪ್ಪಿವೆ. ಶಿಂಷಾ ನದಿ ಭೋರ್ಗೆರೆಯುತ್ತಿದ್ದು, ಸೇತುವೆ ನೀರಿನಲ್ಲಿ ಮುಳುಗಿದೆ.

ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಊಟ, ನಿದ್ರೆಯಿಲ್ಲದೆ ರಾತ್ರಿ ಪೂರಾ ಕಳೆದಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆಬರೆ, ಪಾತ್ರೆ ನೀರಿನಿಂದ ನಾಶವಾಗಿವೆ. ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದ ಬೆಳೆಗಳು ಕೊಚ್ಚಿ ಹೋಗಿವೆ.

ಕೆರೆಯಂಗಳದ ಬಡಾವಣೆ ಜಲಾವೃತ

ಭಾರಿ ಮಳೆಗೆ ಮಂಡ್ಯ ನಗರದ ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಇಲ್ಲಿನ ಬೀಡಿ ಕಾರ್ಮಿಕರ ಕಾಲನಿಯ ಮನೆಗಳ ಸುತ್ತ ಮೂರು ನಾಲ್ಕು ಅಡಿ ನೀರು ನಿಂತಿದೆ. ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ. ನಿವಾಸಿಗಳು ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಪರದಾಡಿದ್ದಾರೆ.

ಕೆರೆಯನ್ನು ಮುಚ್ಚಿಸಿ ಬಡಾವಣೆ ನಿರ್ಮಿಸಿದ ಪರಿಣಾಮ ವಿವೇಕಾನಂದ ಬಡಾವಣೆ ಇಂತಹ ಪರಿಸ್ಥಿತಿ ಮರುಕಳಿಸುತ್ತಿದೆ. ಇಲ್ಲಿ ವಾಸಿಸುವ ಜನರು ಮಳೆ ಬಂತೆಂದರೆ ಭಯ, ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇದೇ ಬಡಾವಣೆಯ ನೀರು ರಸ್ತೆಗೆ ಹರಿದ ಪರಿಣಾಮ ಮಂಡ್ಯ-ನಾಗಮಂಗಲ ರಸ್ತೆ ವಾಹನ ಸಂಚಾರಕ್ಕೆ ಅಡಚಣೆ ಆಯಿತು. ಕಾಳಿಕಾಂಬ ಸ್ಲಂ ಬಡಾವಣೆಯೂ ಜಲಾವೃತವಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಡ್ಯದ ವಿವೇಕಾನಂದ ರಸ್ತೆಯಲ್ಲಿ ನೀರು ಹೆಚ್ಚಾಗಿ ನಾಗರಿಕರು ಪರದಾಡಿದರು.

ಬೆಂಗಳೂರು-ಮೈಸೂರು ವಾಹನ ಸಂಚಾರ ಸ್ಥಗಿತ

ತಾಲೂಕಿನ ಬೂದನೂರು ಕೆರೆ ಏರಿ ಒಡೆದು  ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಕೆರೆ ನೀರು ಹರಿಯುತ್ತಿದ್ದು, ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಾರ್ಗದ ವಾಹನಗಳನ್ನು ಭಾರತಿನಗರ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಕೆರೆ ವ್ಯಾಪ್ತಿಯ ನೂರಾರು ಎಕರೆ ಬೆಳೆಗಳು ಜಲಾವೃತವಾಗಿ ರೈತರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಶಿಂಷಾ ನದಿಯಲ್ಲಿ ಭೋರ್ಗರೆಯುತ್ತಿದ್ದು, ಮದ್ದೂರು ತಾಲೂಕು  ಸೀನಪ್ಪನದೊಡ್ಡಿ  ಬಳಿ ನದಿಗೆ ನಿರ್ಮಿಸಿರುವ ಸೇತುವೆ ಮುಳುಗಿಹೋಗಿ ಸಂಪರ್ಕ ಕಡಿತಗೊಂಡಿದೆ. ಅಣೆದೊಡ್ಡಿ ಬಳಿ ನದಿ ದಂಡೆಯಲ್ಲಿ ಕೊಪ್ಪ ಎಸ್‍ಎನ್‍ಎಸ್ ಸಕ್ಕರೆ ಕಾರ್ಖಾನೆಗೆ ನೀರು ಸರಬರಾಜು ಮಾಡಲು ನಿರ್ಮಿಸಿರುವ ಪಂಪ್ ಹೌಸ್‍ನಲ್ಲಿ ಸಿಲುಕಿಕೊಂಡಿದ್ದ ಸೆಕ್ಯೂರಿಟಿಯನ್ನು ರಕ್ಷಿಸಲು ತೆರಳಿದ ಸ್ಥಳೀಯ ಇಬ್ಬರೂ ನೀರಿನಲ್ಲಿ ಸಿಲುಕಿಕೊಂಡರು. ಪೊಲೀಸರು ಆಗಮಿಸಿ ಸಾರ್ವಜನಿಕರ ಸಹಾಯದಿಂದ ತೆಪ್ಪ, ಹಗ್ಗ ಬಳಸಿ ಅವರನ್ನು ರಕ್ಷಿಸಿ ದಡ ಸೇರಿಸಿದರು.

ಮಂಡ್ಯ ತಾಲೂಕಿನ ಸಾತನೂರು ಕೆರೆ ಕೋಡಿ ಒಡೆದು ನೀರು ಗ್ರಾಮಕ್ಕೆ ನುಗ್ಗಿದ ಪರಿಣಾಮ ಗ್ರಾಮಸ್ಥರು ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಜಿಲ್ಲೆಯ ಹಲವೆಡೆ ಉಂಟಾಗಿದೆ. ಇದಲ್ಲದೆ ಸಾವಿರಾರು ಎಕರೆ ಬೆಳೆಗಳು ಜಲಾವೃತಗೊಂಡಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

38 ಕುರಿ, ಮೇಕೆ ಮೃತ್ಯು: ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಭಾರೀ ಮಳೆಯಿಂದ ಮನೆ ಕುಸಿದು ಬಿದ್ದ ಪರಿಣಾಮ ಯಶೋಧಮ್ಮ ಎಂಬುವರಿಗೆ ಸೇರಿದ 32 ಕುರಿಗಳು ಮತ್ತು 6 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 3 ಕುರಿಗಳು ಬದುಕಿದ್ದು, 7 ಕುರಿಗಳು ನಾಪತ್ತೆಯಾಗಿವೆ ಎಂದು ವರದಿಯಾಗಿದೆ. ಯಶೋಧಮ್ಮ ಪತಿ ಅನಾರೋಗ್ಯದಿಂದ ಹಆಸಿಗೆ ಹಿಡಿದಿದ್ದು, ಯಶೋಧಮ್ಮ ಕುರಿ, ಮೇಕೆ ಸಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News