×
Ad

ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳ ಟೂಲ್‍ಕಿಟ್ ಹಗರಣ: ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಲೋಕಾಯುಕ್ತಕ್ಕೆ ಆಪ್ ದೂರು

Update: 2022-08-02 20:33 IST

ಬೆಂಗಳೂರು, ಆ.2: ಕೈಗಾರಿಕಾ ತರಬೇತಿ ಕೇಂದ್ರದ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ವಿತರಿಸುವ ಟೂಲ್‍ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿ ಸಚಿವ ಡಾ.ಅಶ್ವತ್ಥ ನಾರಾಯಣ್ ವಿರುದ್ಧ ಆಮ್ ಅದ್ಮಿ ಪಾರ್ಟಿ ಲೋಕಾಯುಕ್ತರಿಗೆ ದಾಖಲೆ ಸಹಿತ ಮಂಗಳವಾರ ದೂರು ಸಲ್ಲಿಸಿತು.

ಸುದ್ದಿಗಾರರೊಂದಿಗೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ‘ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್‍ಗಳನ್ನು ಖರೀದಿಸುವ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿದೆ. ಇದನ್ನು ಆಮ್ ಆದ್ಮಿ ಪಾರ್ಟಿಯು ಬಯಲು ಮಾಡಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರೂ, ರಾಜ್ಯ ಸರಕಾರವು ಈ ಹಗರಣದ ಕುರಿತು ಯಾವುದೇ ತನಿಖೆಗೆ ಆದೇಶಿಸಿಲ್ಲ. ಹಗರಣದ ಕಿಂಗ್‍ಪಿನ್ ಆಗಿರುವ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಅವರನ್ನು ರಾಜ್ಯ ಸರಕಾರ ರಕ್ಷಿಸುತ್ತಿರುವುದು ಖಂಡನೀಯ’ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಕೆ.ಮಥಾಯಿ ಮಾತನಾಡಿ, ‘ಹಗರಣವನ್ನು ಲೋಕಾಯುಕ್ತ ನ್ಯಾ. ಪಾಟೀಲ್ ಅವರು ಸರಕಾರದ ಒತ್ತಡಕ್ಕೆ ಮಣಿಯದೇ, ನಿಷ್ಪಕ್ಷಪಾತ ತನಿಖೆ ನಡೆಸಿ ಡಾ. ಅಶ್ವತ್ಥ ನಾರಾಯಣ್ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಎಎಪಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ‘ಟೆಂಡರ್ ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ತಾಂತ್ರಿಕ ಅನುಮೋದನೆ ಪಡೆದುಕೊಂಡಿದೆ. ಮಂತ್ರಿಗಳ ಪ್ರಭಾವದಿಂದಾಗಿ ಬೋಗಸ್ ಕಂಪನಿಗೆ 22 ಕೋಟಿ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿರುವುದು ರಾಜ್ಯ ಬಿಜೆಪಿ ಸರಕಾರದ ಶೇ.40 ಕಮಿಷನ್ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ’ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News