CET ರ‍್ಯಾಂಕಿಂಗ್‌ ವಿವಾದ: ಕೆಇಎ ತೀರ್ಮಾನವೇ ಅಂತಿಮ: ಸಚಿವ ಅಶ್ವತ್ಥನಾರಾಯಣ

Update: 2022-08-02 15:49 GMT

ಬೆಂಗಳೂರು, ಆ.2: ಹಿಂದಿನ ವರ್ಷ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಈ ವರ್ಷ ಪುನಃ ಸಿಇಟಿ ಬರೆದಿರುವ ವಿದ್ಯಾರ್ಥಿಗಳ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಹಿಂದಿನ ವರ್ಷದಲ್ಲಿ ಪಿಯುಸಿ ಪಾಸಾದ 24ಸಾವಿರ ವಿದ್ಯಾರ್ಥಿಗಳಿಗೆ ಈಗ ಪಿಯುಸಿ ಅಂಕಗಳನ್ನು ಪರಿಗಣಿಸಿ, ರ‍್ಯಾಂಕಿಂಗ್‌ ಕೊಟ್ಟರೆ ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇವರಲ್ಲಿ ಒಂದುವರೆ ಲಕ್ಷ ವಿದ್ಯಾರ್ಥಿಗಳು ಹಿಂದಿನ ವರ್ಷವೇ ಸಿಇಟಿ ಬರೆದಿರುವವರು ಹಾಗೂ ಈ ವರ್ಷದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.

ಕಳೆದ ವರ್ಷದ ಐಸಿಎಸ್‍ಇ ಪಠ್ಯಕ್ರಮದ 64 ಮತ್ತು ಸಿಬಿಎಸ್‍ಇ ಪಠ್ಯಕ್ರಮದ 600 ವಿದ್ಯಾರ್ಥಿಗಳು ಕೂಡ ಈ ಬಾರಿ ಸಿಇಟಿ ಬರೆದಿದ್ದು, ಅವರಿಗೂ ಕೇವಲ ಸಿಇಟಿ ಅಂಕದ ಮೇಲೆ ರಾಂಕಿಂಗ್ ಕೊಡಲಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ ಎಂದು ಅವರು ನುಡಿದರು.

ಈ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಏನೇ ಮಾಡಿದರೆ ಇತರ ದೊಡ್ಡ ಸಂಖ್ಯೆಯ ಹಾಗೂ ಎರಡೂ ಪರೀಕ್ಷೆಗಳನ್ನು ಬರೆದವರಿಗೆ ಅನ್ಯಾಯ ಆಗುತ್ತದೆ. ಅವರ ರಾಂಕಿಂಗ್‍ನಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹೀಗಾಗಿ ಕೆಇಎ ತೆಗೆದುಕೊಂಡು ನಿಲುವು ಸರಿ ಇದೆ ಎನ್ನುವುದರ ತೀರ್ಮಾನಕ್ಕೆ ಬರಲಾಯಿತು. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ ಎಂದರು.

2021-22 ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಆಗಿರಲಿಲ್ಲ. ಹೀಗಾಗಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ನೀಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. ನನ್ನ ಪ್ರಕಾರ ಈ 24 ಸಾವಿರ ವಿದ್ಯಾರ್ಥಿಗಳಿಗೂ ವಿವಿಧ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಆತಂಕಕ್ಕೆ ಒಳಗಾಗುವುದು ಬೇಡ. ಇವರಿಗೆಲ್ಲ ಈಗಾಗಲೆ ಒಮ್ಮೆ ಅವಕಾಶ ನೀಡಲಾಗಿದೆ.

-ಡಾ. ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News