ಕಲ್ಲು ನಾಗರಕ್ಕೆ ಹಾಲು ನೀಡುವ ಬದಲು ಮಕ್ಕಳಿಗೆ ನೀಡಿದರೆ ಪೌಷ್ಟಿಕತೆ ಹೆಚ್ಚುತ್ತೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2022-08-02 15:54 GMT

ಮೈಸೂರು,ಆ.2: ಮೈಸೂರಿನ ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಆವರಣದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಪಂಚಮಿ ಹಬ್ಬ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸುವ ಶಕ್ತಿ ಜ್ಞಾನಕ್ಕೆ ಇದೆ.ನುಡಿಗಳಲ್ಲಿ ಜ್ಞಾನಪ್ರಕಾಶ ವಿದ್ದರೆ ಅಜ್ಞಾನ ಅಂಧಕಾರ ಗಳು ಪಲಾಯನ ಮಾಡುತ್ತವೆ. ಕಲ್ಲು ನಾಗರಕ್ಕೆ  ಹಾಲು ನೀಡುವ ಬದಲು ಮಕ್ಕಳಿಗೆ ನೀಡಿದರೆ ದೇಹ ವೃದ್ಧಿ ಹಾಗೂ ಪೌಷ್ಟಿಕತೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ. 

ಇದೇ ಸಂದರ್ಭದಲ್ಲಿ ಕಾಂತರಾಜು ಸೇವಾ ಬಳಗ ಅಧ್ಯಕ್ಷರಾದ ಚೇತನ್ ಕಾಂತರಾಜು ಮಾತನಾಡಿ,  ನಾಗರಪಂಚಮಿ ಹಬ್ಬದ ನಿಮಿತ್ತ ಅನೇಕರು ಕಲ್ಲುನಾಗರ ಗಳಿಗೆ ಇಲ್ಲವೇ ಹುತ್ತದಲ್ಲಿ ಹಾಲು ಸುರಿಯುವುದು ವಾಡಿಕೆ. ಇದು ಅವರವರ ಧಾರ್ಮಿಕ ನಂಬಿಕೆ ಎನ್ನುವುದು ನಿಜ. ಆದರೆ, ವೈಜ್ಞಾನಿಕವಾಗಿ ನೋಡಿದರೆ ಹಾವುಗಳು ಹಾಲನ್ನಾಗಲೀ, ಹಾಲಿನ ಉತ್ಪನ್ನಗಳನ್ನಾಗಲೀ ಸೇವಿಸುವುದಿಲ್ಲ. ಹಾಗಾಗಿ, ಪಂಚಮಿಯಂದು ಪೌಷ್ಟಿಕಾಂಶಗಳ ಆಗರವಾಗಿರುವ ಹಾಲನ್ನು ಹುತ್ತದಲ್ಲಿ ಸುರಿಯುವ ಬದಲು ಹಸಿದವರಿಗೆ ನೀಡುವುದು ಉತ್ತಮ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ  ಮಹಾಸ್ವಾಮಿಗಳು,ಸವಿತಾ ಬಸವಪ್ರಿಯ ಸ್ವಾಮೀಜಿ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ,ಗ್ರಾಮ ಪಂಚಾಯಿತಿ ಸದಸ್ಯ ಮಹಾಂತಪ್ಪ,ಪರಶುರಾಮ್ ಮರಿದೇವರು, ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News