ಬಾಲಮಂದಿರಗಳಿಂದ 132 ಮಕ್ಕಳ ನಾಪತ್ತೆ ಪ್ರಕರಣ: ಕ್ರಮದ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಆ.2: ಸರಕಾರದ ಅಧೀನದಲ್ಲಿರುವ ಬಾಲಮಂದಿರಗಳಿಂದ ಕಣ್ಮರೆಯಾಗಿರುವ 132 ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ. ಈ ಸಂಬಂಧ ಹೈಕೋರ್ಟ್ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡ ಕ್ರಮದ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಈ ಕುರಿತಂತೆ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಜ್ಯದಲ್ಲಿ ಸರಕಾರದ ಅಧೀನದಲ್ಲಿರುವ ಬಾಲ ಮಂದಿರಗಳಿಂದ 2015-16ರಿಂದ 2021ರ ಅಕ್ಟೋಬರ್‍ವರೆಗಿನ ಅವಧಿಯಲ್ಲಿ ಒಟ್ಟು 420 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಕುರಿತು ಎಫ್‍ಐಆರ್ ಕೂಡಾ ದಾಖಲಾಗಿವೆ. ಇವರಲ್ಲಿ 132 ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಲ ನ್ಯಾಯ ಕಾಯ್ದೆ ಪ್ರಕಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಕ್ಕಳ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಪೊಲೀಸ್ ಘಟಕ ಇರಬೇಕು. ಆದರೆ, ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ ಎಂಬುದು ಅರ್ಜಿದಾರರ ಆರೋಪ.