×
Ad

VIDEO - ಚಿತ್ರದುರ್ಗ: ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ

Update: 2022-08-03 12:47 IST

ಚಿತ್ರದುರ್ಗ, ಆ. 3: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಮುರುಘಾ ರಾಜೇಂದ್ರ ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಅಲ್ಲದೆ, ಸಮಾಜ ಸುಧಾರಕ ಬಸವಣ್ಣನವರ ಬೋಧನೆಗಳು, ಇಷ್ಟಲಿಂಗ ಪೂಜೆ ಸೇರಿದಂತೆ ಶರಣರ ವಿಚಾರಧಾರೆಗಳ ಬಗ್ಗೆ ಸ್ವಾಮೀಜಿಗಳಿಂದ ಮಾಹಿತಿ ಪಡೆದುಕೊಂಡರು.

ಬುಧವಾರ ದಾವಣಗೆರೆಯಲ್ಲಿ ಆಯೋಜಿಸಿದ್ದ ‘ಸಿದ್ದರಾಮಯ್ಯ 75 ಅಮೃತ ಮಹೋತ್ಸವ' ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಶಿವಮೂರ್ತಿ ಶರಣರು ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರೊಂದಿಗೆ ಕೆಲಕಾಲ ಚರ್ಚಿಸಿದರು. ಬಳಿಕ ಮಾತನಾಡಿದ ರಾಹುಲ್‍ಗಾಂಧಿ, ‘ನನಗೆ ಬಸವಣ್ಣನವರ ಬಗ್ಗೆ ಒಂದಿಷ್ಟು ಪರಿಚಯವಿದೆ. ತಾವು ಯಾರನ್ನಾದರೂ ಕಳುಹಿಸಿದರೆ ಸಹಜ ಶಿವಯೋಗವನ್ನು ಕಲಿಯುತ್ತೇನೆ' ಎಂದು ಆಶಯ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ‘ಬಸವಣ್ಣನವರು ತಮ್ಮ ಮನೆಯನ್ನು ಬಿಟ್ಟು ಹೊರಬಂದಿದ್ದು ಹೆಣ್ಣುಮಕ್ಕಳಿಗೆ ಸಮಾನತೆ ಸಿಗಲಿಲ್ಲವೆಂಬ ಕಾರಣಕ್ಕೆ. ಪ್ರಪಂಚದ ಮೊದಲ ಸಂಸತ್ ಅನುಭವ ಮಂಟಪವನ್ನು ತೆರೆದು ಸಮಾನತೆಯ ತತ್ವ-ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು' ಎಂದು ನುಡಿದರು.

‘ದಯವೇ ಧರ್ಮದ ಮೂಲ' ಎಂದು ಸಾರಿದ ಬಸವಣ್ಣನವರು, ಕಾಯಕ-ದಾಸೋಹ ಸಿದ್ಧಾಂತಕ್ಕೆ ಮಹತ್ವ ನೀಡಿದರು. ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರಬೇಕು. ಶಾಂತಿ ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟಿದ್ದರು. ಶ್ರದ್ಧೆ ಇಲ್ಲದಿದ್ದರೆ ಯಾವ ಕೆಲಸವೂ ಪರಿಪೂರ್ಣ ಆಗುವುದಿಲ್ಲ ಎಂದು ಶರಣರು ನಂಬಿದ್ದರು' ಎಂದು ಶಿವಮೂರ್ತಿ ಶರಣರು ತಿಳಿಸಿದರು.

ಸ್ವಾಮೀಜಿ, ರಾಹುಲ್ ಗಾಂಧಿಗೆ ‘ಇಷ್ಟಲಿಂಗ ಪೂಜೆ (ಶಿವಯೋಗದ) ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಅಲ್ಲದೆ, ಅವರಿಗೆ ವಿಭೂತಿಧಾರಣೆ ಮಾಡಿ, ಲಿಂಗದೀಕ್ಷೆ ನೀಡಿ ಈಗ ನೀವು ಬಸವ ಭಕ್ತರಾಗಿದ್ದೀರಿ' ಎಂದು ತಿಳಿಸಿದರು. ಶ್ರೀಗಳು, ರಾಹುಲ್ ಗಾಂಧಿಯವರಿಗೆ ಬಸವಣ್ಣನವರ ಭಾವಚಿತ್ರ ನೀಡಿ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಇದೊಂದು ಐತಿಹಾಸಿಕ ಮಠ. ಶ್ರೀಗಳಿಗೆ ಹೇಗೆ ದೀಕ್ಷೆ ಕೊಟ್ಟರೊ ಹಾಗೆಯೇ ರಾಹುಲ್ ಗಾಂಧಿಯವರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ಈ ಮಠಕ್ಕೆ ಬರಬೇಕೆಂದು ಬಹಳ ದಿನದಿಂದ ಹೇಳುತ್ತಿದ್ದರು. ಅನೇಕ ಸಮುದಾಯದವರಿಗೆ ದೀಕ್ಷೆ ಕೊಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ. ನಮ್ಮ ಪಕ್ಷದಿಂದ ಶ್ರೀಮಠ ಮೊದಲಾಗಿ ಯಾವುದೇ ಮಠಗಳಿಗೆ ನೋಯಿಸಿರುವುದಿಲ್ಲ. ಇದು ನಮ್ಮ ತತ್ವ-ಸಿದ್ಧಾಂತ. ಮುಂದೆ ‘ಭಾರತ ಜೋಡೋ' ಕಾರ್ಯಕ್ರಮ ಬರುವಾಗ ಎಲ್ಲರೂ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತೇವೆ' ಎಂದು ಹೇಳಿದರು.

ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿ, ಮಾದಾರಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿ, ಹಿರಿಯೂರು ಆದಿಜಾಂಬವ ಮಠದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮಿ, ಶರಣೆ ಮುಕ್ತಾಯಕ್ಕ, ಶರಣೆ ಅಕ್ಕನಾಗಮ್ಮ ಸೇರಿ ಇನ್ನಿತರರು ಸ್ವಾಮಿಜಿಗಳು ಹಾಗೂ ಪಕ್ಷದ ಮುಖಂಡರಾದ ರಘುಮೂರ್ತಿ, ಎಚ್.ಹನುಮಂತಪ್ಪ, ಬಿ.ಕೆ.ಹರಿಪ್ರಸಾದ್, ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ತಾಜ್‍ಪೀರ್, ಸಲೀಂ ಅಹಮದ್, ಬಿ.ಎನ್.ಚಂದ್ರಪ್ಪ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News