ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗಿ
ದಾವಣಗೆರೆ,ಆ. 3: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಮನೂರು ಆರಮನೆ ಮೈದಾನದಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭವಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದಲೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಗಮಿಸುತ್ತಿದ್ದು, ಮಾರ್ಗ ಮಧ್ಯೆ ವಾಹನ ದಟ್ಟಣೆಯಿಂದ 4-5 ಕಿ.ಮೀ.ನಿಂದಲೇ ಕಾರ್ಯಕರ್ತರು ನಡೆದು ಕೊಂಡು ಕಾರ್ಯಕ್ರಮ ನಡೆಯುತ್ತಿರುವ ಮೈದಾನಕ್ಕೆ ಆಗಮಸುತ್ತಿದ್ದಾರೆ.
ವೇದಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದರು.
ಇನ್ನು ಚಿತ್ರದುರ್ಗದ ಮುರುಘಾ ಮಠದಿಂದ ರಸ್ತೆ ಮಾರ್ಗದ ಮೂಲಕ ದಾವಣಗೆರೆಗೆ ಆಗಮಿಸುತ್ತಿರುವ ರಾಹುಲ್ ಗಾಂಧಿ, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದ ಸಿದ್ಧತೆ ಹೇಗಿದೆ?
ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್‍ನಲ್ಲಿ ಅಮೃತ ಮಹೋತ್ಸವಕ್ಕೆ ಕಾರ್ಯಕ್ರಮಕ್ಕಾಗಿ ಸುಮಾರು ಆರು ಲಕ್ಷ ಮೈಸೂರು ಪಾಕ್ ಸಿದ್ಧವಾಗಿದೆ . ತಯಾರಾದ ಮೈಸೂರ್ ಪಾಕ್‍ಅನ್ನು ಸುರಕ್ಷಿತವಾಗಿ ರಟ್ಟಿನ ಬಾಕ್ಸ್ ನಲ್ಲಿ ಹಾಕಿ ಪ್ಯಾಕ್ ಮಾಡಲಾಗಿದೆ. ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಮೈಸೂರು ಪಾಕ್‍ನೊಂದಿಗೆ ಬಿಸಿ ಬೇಳೆಬಾತ್, ಪಲಾವ್, ಮೊಸರು ಬಜ್ಜಿ, ಮೊಸರನ್ನ ಕೊಡಲಾಗುವುದು. ಆಗಸ್ಟ್ 2ರೊಳಗೆ ಮೈಸೂರ್ ಪಾಕ್ ಸಿದ್ಧಪಡಿಸಿ ಬಳಿಕ ಊಟದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನರು ಅಡಿಗೆ ಬಾಣಿಸಿಗರು ಹಾಗೂ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಮೂರು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೊಂದು ಕಡೆ 170 ಕೌಂಟರ್ ಗಳಿವೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ದಿನ ಬೆಳಗ್ಗೆ 9 ಗಂಟೆಯಿಂದಲೇ ಊಟದ ವ್ಯವಸ್ಥೆ ಪ್ರಾರಂಭಗೊಂಡಿದೆ. ಸದ್ಯಕ್ಕೆ ಆರು ಲಕ್ಷ ಜನರಿಗೆ ಊಟಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಬರುವ ಜನರನ್ನು ನೋಡಿಕೊಂಡು ಮತ್ತಷ್ಟು ಅಡುಗೆ ಮಾಡಿಕೊಳ್ಳಲು ಸಂಘಟಕರು ತೀರ್ಮಾನಿಸಿದ್ದಾರೆ.