ಮಸೂದ್, ಫಾಝಿಲ್‍ ಕುಟುಂಬಕ್ಕೆ ಪರಿಹಾರ ಯಾಕಿಲ್ಲ?: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

Update: 2022-08-03 18:21 GMT

ಬೆಂಗಳೂರು/ದಾವಣಗೆರೆ, ಜು. 3: ‘ಕರಾವಳಿ ಭಾಗದಲ್ಲಿ ಹದಿನೈದು ದಿನಗಳಲ್ಲಿ ಮೂವರ ಹತ್ಯೆ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಸಮುದಾಯದವರ ಮನೆಗೆ ಮಾತ್ರ ಭೇಟಿ ನೀಡಿ ಸಾಂತ್ವನ ಹೇಳಿ, ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮಸೂದ್ ಹಾಗೂ ಫಾಝಿಲ್‍ಗೆ ಯಾಕೆ ಪರಿಹಾರ ನೀಡಿಲ್ಲ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಬುಧವಾರ ಇಲ್ಲಿನ ಎಸ್.ಎಸ್.ಪ್ಯಾಲೇಸ್ ಮೈದಾನದಲ್ಲಿ ಏರ್ಪಡಿಸಿದ್ದ ‘ಸಿದ್ದರಾಮಯ್ಯ 75 ಅಮೃತ ಮಹೋತ್ಸವ' ಸಮಾರಂಭದಲ್ಲಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹಾಗೂ ಅಮೃತ ಮಹೋತ್ಸವ ಸಮಿತಿ ವತಿಯಿಂದ ಅದ್ದೂರಿ ಸನ್ಮಾನ ಸ್ವೀಕರಿಸಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

'ನಾನು ಕಳೆದ ನಲವತ್ತು ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿದ್ದು, ಶಾಸಕ, ಸಚಿವ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಆದರೆ, ನನ್ನ ಜೀವನದಲ್ಲಿ ನಾನು ಎಂದೂ ಇಂತಹ ಭ್ರಷ್ಟ, ಕೋಮುವಾದಿ ಸರಕಾರವನ್ನು ಕಂಡಿಲ್ಲ' ಎಂದು ಅವರು ಕಿಡಿಗಾರಿದರು.

'ರಾಜ್ಯದಲ್ಲಿರುವ ಭ್ರಷ್ಟ ಮತ್ತು ಕೋಮುವಾದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಅಲ್ಲದೆ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ' ಎಂದು ಘೋಷಿಸಿದ ಸಿದ್ದರಾಮಯ್ಯ, 'ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನೀವೆಲ್ಲರೂ ನನಗೆ ಶುಭಕೋರಿದ್ದು, ಅದರ ಜೊತೆಗೆ ಬಿಜೆಪಿ ಸರಕಾರ ತೊಲಗಿಸುವ ಶಪಥ ಮಾಡಬೇಕು. 'ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ' ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News