ಪ್ರಜಾಪ್ರಭುತ್ವ ಮೀರಿದ ರಾಜನೀತಿ ಬೇರೊಂದಿಲ್ಲ: ನ್ಯಾ.ಸಂತೋಷ್ ಹೆಗ್ಡೆ

Update: 2022-08-03 14:00 GMT

ಮಂಡ್ಯ, ಆ.3: 'ಪ್ರಜಾಪ್ರಭುತ್ವ ಮೀರಿಸಿದ ರಾಜನೀತಿ ಬೇರೊಂದು ಇಲ್ಲ. ಪ್ರಜಾಪ್ರಭುತ್ವದ ಆಡಳಿತ ಸಂಸ್ಥೆಗೆ ಬರುವವನು ತಾನೊಬ್ಬ ಜನತಾ ಸೇವಕ ಎಂಬುದನ್ನು ಮರೆಯಬಾರದು. ಇದಕ್ಕೆ ತಕ್ಕ ಉದಾಹರಣೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ' ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಡಳಿತಗಾರರಿಗೆ ನಾಲ್ವಡಿ ಅವರ ಆಳ್ವಿಕೆ ಮಾದರಿಯಾಗಿದೆ ಎಂದರು.

ಚರಿತ್ರೆಯ ಪುಟಗಳನ್ನು ತೆಗೆದು ನೋಡಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ರಾಜ್ಯಕ್ಕೆ, ದೇಶಕ್ಕೆ ಕೊಟ್ಟಂತಹ ಉತ್ತಮ ಆಡಳಿತವನ್ನು ಬೇರೆ ಯಾರೂ ಕೊಟ್ಟಿಲ್ಲ. ತನ್ನದೇ ಸ್ವತ್ತನ್ನು ಅಡವಿಟ್ಟು ಜನರಿಗಾಗಿ ಸಂಸ್ಥೆ ಕಟ್ಟಿದಂತಹ ನಾಲ್ವಡಿ ಅವರಂತಹ ಬೇರೊಬ್ಬ ಆಡಳಿತಗಾರ ಸಿಗಲಾರ ಎಂದು ಅವರು ಅಭಿಪ್ರಾಯಪಟ್ಟರು.

ನಾಲ್ವಡಿ ಅವರ ಆಡಳಿತದ ಬಗ್ಗೆ ಪುಸ್ತಕವನ್ನು ಬರೆದು ಶಾಲಾ ಮಕ್ಕಳಿಗೆ ಮಾತ್ರವಲ್ಲದೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗದವರು ಸೇರಿದಂತೆ ಎಲ್ಲರಿಗೂ ಪರಿಚಯ ಮಾಡಿದರೆ ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಬಹುದು ಎಂದು ಅವರು ಸಲಹೆ ನೀಡಿದರು.

ತೃಪ್ತಿ ಮತ್ತು ಮಾನವೀಯ ಮೌಲ್ಯಗಳ ಹೊಂದಿರುವ ವ್ಯಕ್ತಿಗಳಿಗೆ ಅಕ್ರಮವಾಗಿ ಹಣ, ಆಸ್ತಿ ಮಾಡುವ ದುರಾಸೆ ಬರುವುದಿಲ್ಲ. ಇರುವುದರಲ್ಲೇ ಸಂತೃಪ್ತಿಪಡುತ್ತಾನೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಣುತ್ತಾನೆ.  ಇಂತಹ ಮೌಲ್ಯಗಳು ಇಂದಿನ ಆಡಳಿತ ನಡೆಸುವವರಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಸಾನಿಧ್ಯವಹಿಸಿದ್ದ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿ, ದೂರದೃಷ್ಟಿವುಳ್ಳ, ಸಾಮಾಜಿಕ ಕಳಕಳಿಯ, ಸರ್ವರನ್ನೂ ಸಮಾನವಾಗಿ ಕಾಣುವಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಸಂತತಿ ಹೆಚ್ಚಾದರೆ ಈ ನಾಡು ಬೆಳಗುತ್ತದೆ. ನಾಲ್ವಡಿ ಅವರನ್ನು ಪ್ರತಿಯೊಬ್ಬರೂ ನಿತ್ಯಸ್ಮರಣೆ ಮಾಡಬೇಕು. ಅವರ ಆಡಳಿತಗಾಥೆಯನ್ನು ಹರಿಕಥೆ ರೂಪದಲ್ಲಿ ಜನಮನಕ್ಕೆ ತಲುಪಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಾಲ್ವಡಿ ಅವರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದರು. ಶಿಕ್ಷಣ ಪಡೆದವರಿಗೆ ಉದ್ಯೋಗ ಕಲ್ಪಿಸಲು ಉದ್ದಿಮೆ ಸ್ಥಾಪಿಸಿದರು. ಸರ್ವರ ಆರೋಗ್ಯಕ್ಕೆ ಆಸ್ಪತ್ರೆಗಳನ್ನು ತೆರೆದರು. ರೈತರಿಗೆ ಕೆರೆಕಟ್ಟೆ, ಡ್ಯಾಂ ನಿರ್ಮಿಸಿದರು. ಇದಲ್ಲದೆ ಕಲೆ, ಸಾಹಿತ್ಯ, ಸಂಸ್ಕøತಿಗೆ ಒತ್ತು ನೀಡಿದರು. ನಾಲ್ವಡಿಯವರ ಆಳ್ವಿಕೆಯ ಕಾಲದ ಸುವರ್ಣಯುಗವನ್ನು ಮತ್ತೆ ಕಾಣುವಂತಾಗಬೇಕು ಎಂದು ಸ್ಮರಿಸಿದರು.

ಖ್ಯಾತ ವೈದ್ಯರಾದ ಡಾ.ಎಸ್.ಸಿ.ಶಂಕರೇಗೌಡ, ಡಾ.ರವಿಕುಮಾರ್, ಎಂಒಬಿ ಸಂಸ್ಥೆ ನಿರ್ದೇಶಕಿ ಸಿಸ್ಟರ್ ಪಿಂಟೋ ಮ್ಯಾಥ್ಯೂ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಡು ರಚನೆಕಾರ ಹನಸೂಗೆ ಸೋಮಶೇಖರ್, ಗಾಯಕ ಜಯಶಂಕರ ಮೇಸ್ತ್ರಿ ಹಾಗೂ ಪ್ರಗತಿಪರ ರೈತ ಮಹಿಳೆ ಹೆಮ್ಮನಹಳ್ಳಿ ಕಾಮಾಕ್ಷಿ ಅವರನ್ನು ಸನ್ಮಾನಿಸಲಾಯಿತು. ನಾಲ್ವಡಿ ಕುರಿತ ಪ್ರಬಂಧ ಸ್ಪರ್ಧೆ ವಿಜೇತ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ‘ಅನ್ನದಾತ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ನಾಲ್ವಡಿ ಅವರ ಆಡಳಿತದ ಸಾಧನೆಗಳನ್ನು ವಿವರಿಸಿದರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷ ಎಸ್.ಎಚ್.ಮಂಜು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಟ್ರಸ್ಟ್ ಅಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪದಾಧಿಕಾರಿಗಳಾದ ಜಗದೀಶ, ಎಂ.ಸಿ.ಲಂಕೇಶ್, ನವೀನ್, ಟಿ.ಡಿ.ನಾಗರಾಜು, ದೇವೇಗೌಡ ಉಪಸ್ಥಿತರಿದ್ದರು. ಜನ್ನಿ ಮತ್ತು ತಂಡ ನಾಲ್ವಡಿ ಕುರಿತ ಗೀತೆಗಳನ್ನು ಹಾಡಿದರು.

“ನಾನು ಲೋಕಾಯುಕ್ತ ಹುದ್ದೆಗೆ ಬರುವವರೆಗೆ ಕೂಪಮಂಡೂಕನಾಗಿದ್ದೆ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಭ್ರಷ್ಟಾಚಾರದ ಬಗ್ಗೆ ಅಷ್ಟು ಅರಿವಿರಲಿಲ್ಲ. ಇದು ಏಕೆ ಆಗುತ್ತಿದೆ ಎಂದು ಚರ್ಚಿಸಿದಾಗ, ಇದು ವ್ಯಕ್ತಿಯ ತಪ್ಪಲ್ಲ, ಸಮಾಜದ ತಪ್ಪು ಎಂಬುದು ತಿಳಿಯಿತು. ನನ್ನ ಚಿಕ್ಕಂದಿನ ಸಮಾಜ ಜೈಲಿಗೆ ಹೋದವರನ್ನು ಮನೆ ಹತ್ತಿರ ಸೇರಿಸುತ್ತಿರಲಿಲ್ಲ. ಅದೊಂದು ಸಾಮಾಜಿಕ ಶಿಕ್ಷೆ ಆಗಿತ್ತು. ಆದರೆ, ಇಂದು  ಜೈಲಿಗೆ ಹೋಗಿ ಬೇಲ್ ತೆಗೆದುಕೊಂಡ ಬಂದವನಿಗೆ ಸಲಾಂ ಒಡೆಯುವ ಸಮಾಜದಲ್ಲಿದ್ದೇವೆ.”

-ನ್ಯಾ.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News