ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್ ನಾಯಕರು

Update: 2022-08-03 17:18 GMT

ಬೆಂಗಳೂರು/ ದಾವಣಗೆರೆ, ಆ. 3: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು. ಮಾತ್ರವಲ್ಲ, ವೇದಿಕೆಯ ಮೇಲೆ ಸಿದ್ದರಾಮಯ್ಯನವರನ್ನು ಸನ್ಮಾನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರನ್ನು ಆಲಿಂಗನ ಮಾಡಿ ಕೈ ಕೈ ಹಿಡಿದು ನಾವು ಒಗ್ಗಟ್ಟಿನಿಂದ ಇದ್ದೇವೆ ಎಂಬ ಸಂದೇಶ ಸಾರಿದರು. 

ಬುಧವಾರ ದಾವಣಗೆರೆಯ ಎಸ್.ಎಸ್.ಪ್ಯಾಲೇಸ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯನವರಿಗೆ ರಾಮನಗರ ರೇಶ್ಮೆ ಶಾಲು ಹೊದಿಸಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಸ್ತಕವನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಆ ಬಳಿಕ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವ, ಇದೇ ವೇಳೆ ನಮ್ಮ-ನಿಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯನವರು ಜನ್ಮದಿನಾಚರಣೆಯ ಅಮೃತ ಮಹೋತ್ಸವ. ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಇದು ದೇಶ ಹಾಗೂ ನಮ್ಮ ನಿಮ್ಮೆಲ್ಲರಿಗೂ ಸಂಭ್ರಮದ ಕ್ಷಣ' ಎಂದು ಬಣ್ಣಿಸಿದರು.

‘ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ನಾವು ಈ ದೇಶದ ಜನತೆಗೆ ನ್ಯಾಯವನ್ನು ಒದಗಿಸಿ ಕೊಡಬೇಕು. 2013ರ ಬಸವ ಜಯಂತಿಯಂದು ಸಿದ್ದರಾಮಯ್ಯ ತಮ್ಮ ಅಧಿಕಾರ ವಹಿಸಿಕೊಂಡಿದ್ದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಪಕ್ಷದ ತತ್ವ. ಇಲ್ಲಿ ನೆರೆದ ಜನರ ಆಸೆ ವಿಧಾನಸೌಧದ ಮೂರನೆ ಮಹಡಿಯಲ್ಲಿ ಓಡಾಡಬೇಕೆಂಬುದೇ ಆಗಿದೆ. ಹೀಗಾಗಿ ರಾಜ್ಯದಲ್ಲಿನ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕು' ಎಂದು ಶಿವಕುಮಾರ್ ಶಪಥ ಮಾಡಿದರು.

‘ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವುದೇ ನಮ್ಮ ಪ್ರತಿಜ್ಞೆ ಆಗಬೇಕು. ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಅರ್ಧಗಂಟೆಯಲ್ಲಿ ರಾಜ್ಯದ ಜನ ಹಸಿವಿನಿಂದ ಇರಬಾರದೆಂದು ಮಹತ್ವದ ನಿರ್ಧಾರ ಕೈಗೊಂಡು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿದ ಕೀರ್ತಿ ಸಿದ್ದರಾಮಯ್ಯ ಸರಕಾರದ್ದು. ಭ್ರಷ್ಟ ಸರಕಾರ ಕಿತ್ತೊಗೆಲು ನಮ್ಮೊಂದಿಗೆ ನೀವು ಎಲ್ಲರೂ ಸಂಕಲ್ಪ ಮಾಡಬೇಕು' ಎಂದು ಶಿವಕುಮಾರ್ ತಿಳಿಸಿದರು.

ಸಿದ್ದರಾಮಯ್ಯ ಸರ್ವಜನಾಂಗದ ನಾಯಕ: ‘ಸಿದ್ದರಾಮಯ್ಯನವರು ಕೇವಲ ಹಿಂದುಳಿದ ವರ್ಗದ ನಾಯಕರಲ್ಲ, ಬದಲಿಗೆ ಅವರು ಸರ್ವ ಜನಾಂಗ, ಧರ್ಮ ಹಾಗೂ ಎಲ್ಲ ವರ್ಗಕ್ಕೂ ಸೇರಿದ ನಾಯಕ. ಬೆಳಕು, ಅಧಿಕಾರದ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಸಿದ್ದರಾಮಯ್ಯನವರಿಗೆ ಉತ್ತಮ ಆರೋಗ್ಯ, ಈ ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ಮೂಲಕ ಈ ರಾಜ್ಯಕ್ಕೆ ನೆಮ್ಮದಿ ನೀಡಬೇಕು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಭ್ರಷ್ಟತೆಯೇ ವ್ಯಾಪಾರ: ‘ರಾಜ್ಯದಲ್ಲಿನ ಬಿಜೆಪಿ ಸರಕಾರ ಭ್ರಷ್ಟಾಚಾರವನ್ನೆ ವ್ಯಾಪಾರ ಮಾಡಿದ್ದು, ಶೇ.40ರಷ್ಟು ಕಮಿಷನ್ ಸರಕಾರ ಆಳ್ವಿಕೆ ನಡೆಸುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರ ಜನತೆಗೆ ನೀಡಿದ್ದ 165 ಭರವಸೆಗಳನ್ನು ಈಡೇರಿಸಿದೆ. ಜನಪರ ಆಡಳಿತಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರುವ ಮೂಲಕ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸಬೇಕು'

-ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ


 ‘ರಾಜ್ಯದಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಸಂವಿಧಾನವನ್ನೇ ದುರ್ಬಲಗೊಳಿಸಲು ಹೊರಟಿದೆ. ಬಿಜೆಪಿಯ ದುರಾಡಳಿತವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ವಿಪಕ್ಷ ನಾಯಕ ಸಿದ್ದರಾಮಯ್ಯರಲ್ಲಿದೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಕೇವಲ ಶುಭಾಶಯ ಸಲ್ಲಿಕೆಗೆ ಮಾತ್ರ ಸೀಮಿತವಾಗದೆ, ಸಂವಿಧಾನವನ್ನು ಸಂರಕ್ಷಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕು'

-ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ವಿಪಕ್ಷ ನಾಯಕ


‘ದಲಿತ, ಶೋಷಿತರಿಗೆ ಧ್ವನಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದಾರೆ. ನಾನು ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂಟು ವರ್ಷ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಸಹೋದರನಂತೆ ನನ್ನನ್ನು ಜೊತೆಯಲ್ಲಿಟ್ಟುಕೊಂಡು ಬೆಂಬಲ ನೀಡಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಹಕಾರ ನೀಡಿದರು'

-ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News