ಜನ್ಮದಿನ ಆಚರಣೆ ಮೂಲಕ ಸಿದ್ದರಾಮಯ್ಯರ ಮಜೋತ್ಸವ: ನಳಿನ್‍ಕುಮಾರ್ ಕಟೀಲ್

Update: 2022-08-03 18:07 GMT

ಬೆಂಗಳೂರು, ಆ.3: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಜನರನ್ನು ಮರೆತು ತಮ್ಮ ಜನ್ಮದಿನ ಆಚರಣೆ ಮೂಲಕ ಮಜಾವಾದದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಟೀಕಿಸಿದ್ದಾರೆ. 

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷ ಎತ್ತಿದ ಕೈ. ಇದೆಲ್ಲವನ್ನೂ ಮರೆತ ಸಮಾಜವಾದಿ ಹಣೆಪಟ್ಟಿ ಕಟ್ಟಿಕೊಂಡ ಮಜಾವಾದಿ ಸಿದ್ದರಾಮಯ್ಯ ಸುಮಾರು 75 ಕೋಟಿಗಿಂತ ಅಧಿಕ ಖರ್ಚು ಮಾಡಿ ತಮ್ಮ ಬೆಂಬಲಿಗರಿಂದ ಜನ್ಮದಿನೋತ್ಸವ ಆಚರಿಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರವು ಕರ್ನಾಟಕದ ಜನರ ಸಂಕಷ್ಟ ಮತ್ತು ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ “ಜನೋತ್ಸವ” ಆಚರಣೆಯನ್ನೇ ರದ್ದು ಮಾಡಿತ್ತು. ಆದರೆ, ಕಾಂಗ್ರೆಸ್ಸಿಗರ ಒಂದು ಬಣವು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಲು ಈ ಅದ್ಧೂರಿ ಹಾಗೂ ಸಂಭ್ರಮದ ಕಾರ್ಯಕ್ರಮಕ್ಕೆ ದುಂದುವೆಚ್ಚ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ ಎಂಬುದನ್ನು ಇದರಿಂದ ಸ್ಪಷ್ಟಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಅದರ ಬದಲಾಗಿ ಅವರು ತಮ್ಮದೇ ಜನ್ಮದಿನವನ್ನು ಆಚರಿಸಿಕೊಂಡು ವಿಜೃಂಭಿಸುವ ಅವಶ್ಯಕತೆ ಇತ್ತೇ? ಎಂದು ಪ್ರಶ್ನಿಸಿರುವ ನಳಿನ್ ಕುಮಾರ್ ಕಟೀಲ್, ತಾವು ಆಡಳಿತ ಮಾಡುವಾಗ ಹಿಂದೂ ವಿರೋಧಿ ಧೋರಣೆಯನ್ನೇ ಅನುಸರಿಸುತ್ತಿದ್ದ ಸಿದ್ದರಾಮಯ್ಯ ಪಿಎಫ್‍ಐ ಮತ್ತು ಎಸ್‍ಡಿಪಿಐ ಪಕ್ಷಗಳ ನೂರಾರು ಮುಖಂಡರ ಕೇಸುಗಳನ್ನು ರದ್ದು ಮಾಡಿ ಆ ಸಂಘಟನೆಗಳ ಮೂಲಕ ಕೋಮುವಾದಕ್ಕೆ ಪುಷ್ಟಿ ನೀಡಿದ್ದರು ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News