ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಮಳೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ

Update: 2022-08-04 12:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 4: ‘ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು ಸಹಿತ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ರಸ್ತೆ, ಸೇತುವೆಗಳು ಹಾನಿಯಾಗಿದ್ದು ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದ್ದು, ನಡುಗಡ್ಡೆಯಂತಾಗಿವೆ. ಇನ್ನೂ ಎರಡು ದಿನಗಳ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮೂರು ದಿನಗಳಿಂದ ಉದ್ಯಾನನಗರಿ ಬೆಂಗಳೂರಿನಲ್ಲಿ ಎಡಬಿಡದೆ ಹಗಲು-ರಾತ್ರಿಯ ಪರಿವೆ ಇಲ್ಲದೆ ಮಳೆ ಸುರಿಯುತ್ತಿದ್ದು, ನಗರದ ಜನತೆ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ಯಂತ ಹೆಚ್ಚಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ರಾತ್ರಿಯೆಲ್ಲ ನಿದ್ದೆ ಇಲ್ಲದೆ ಮಳೆಯ ನೀರನ್ನು ಹೊರಹಾಕುವುದರಲ್ಲಿ ನಿರತರಾಗಿದ್ದರು. ಮಳೆ ಹಿನ್ನೆಲೆಯಲ್ಲಿ ಇಲ್ಲಿನ ಸಂಪಂಗಿರಾಮ ನಗರದಲ್ಲಿ ಮನೆಯೊಂದರ ಗೋಡೆ ಕುಸಿತವಾಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ.

ತುಮಕೂರು, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಹಾಸನ, ಕಲಬುರಗಿ, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಈ ಮಧ್ಯೆ ಮುಂಗಾರು ಕೃಷಿ ಚಟುವಟಿಕೆ ಆರಂಭಿಸಲು ಮುಂದಾಗಿದ್ದ ಅನ್ನದಾತರು ಮಳೆಯಿಂದಾಗಿ ಆತಂಕಕ್ಕೆ ಸಿಲುಕಿದ್ದಾರೆ.

ಇನ್ನು ಮಳೆ ಹಿನ್ನೆಲೆಯಲ್ಲಿ ರಾಜಕಾಲುವೆ ಬಹುತೇಕ ಚರಂಡಿಗಳು ಭರ್ತಿಯಾಗಿವೆ. ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ದ್ವಿಚಕ್ರ ವಾಹನ ಸವಾರನೋರ್ವ ರಸ್ತೆಯಲ್ಲಿನ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಈ ಅವಘಡ ಸಂಭವಿಸಿದೆ ಎಂದು ಗೊತ್ತಾಗಿದೆ. ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಕಾಲಿನ ಹಿಮ್ಮಡಿ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, 22 ಹೊಲಿಗೆ ಹಾಕಲಾಗಿದೆ.

ಮಳೆ ಹಿನ್ನೆಲೆಯಲ್ಲಿ ವಾಹನ ಸವಾರರು, ಸಾರ್ವಜನಿಕ ಪ್ರಯಾಣಿಕರು ಪ್ರಯಾಸ ಪಡುವಂತೆ ಆಯಿತು. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಎಡಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದೆ. ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.


‘ಮೂರು ದಿನಗಳಿಂದ ಸತತ ಮಳೆಯಿಂದಾಗಿ ಬೆಳಗ್ಗೆ 9.30ರ ಸುಮಾರಿಗೆ ಮನೆಯ ಸಂಪೂರ್ಣ ಗೋಡೆ ಕುಸಿದಿದೆ. ಮನೆ ಕುಸಿಯುವ ವೇಳೆ ಮಗ ಮನೆಯಲ್ಲಿ ಮಲಗಿದ್ದ. ಗೋಡೆ ಬೀಳುವ ಶಬ್ದ ಕೇಳಿ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದೇವೆ. ಇಲ್ಲಿಯವರೆಗೂ ಬಿಬಿಎಂಪಿ ಯಾವ ಅಧಿಕಾರಿಗಳು, ಶಾಸಕರು ಯಾರು ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿಲ್ಲ'

-ಚಂದ್ರು ಮನೆ ಮಾಲಕ ಸಂಪಂಗಿರಾಮನಗರ

► ಮೀನುಗಾರರಿಗೆ ಎಚ್ಚರಿಕೆ

‘ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ ರಾಜ್ಯದ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಗಂಟೆಗೆ 50ರಿಂದ 60ಕಿ.ಮೀ ತಲುಪುವ ಸಾಧ್ಯತೆಗಳಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ' ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News