ಶಿಕ್ಷಕಿ ಕೊಲೆ ಪ್ರಕರಣ: ನಗರಸಭೆ ಸದಸ್ಯೆ ಸೇರಿ ನಾಲ್ವರು ಆರೋಪಿಗಳ ಬಂಧನ

Update: 2022-08-04 11:59 GMT
(ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್)

ಮೈಸೂರು,ಆ.4: ಕಳೆದ ಮಾಚ್ 8 ರಂದು  ನಂಜನಗೂಡು ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ನಡೆದಿದ್ದ ಹಿಂದಿ ಶಿಕ್ಷಕಿ ಸುಲೋಚನಾ ಕೊಲೆ ಸಂಬಂಧ ನಂಜನಗೂಡು ನಗರಸಭೆ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.

ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಆರೋಪಿಗಳಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನಾಗಿದ್ದು, ನಗರಸಭೆಯ ಹಾಲಿ ಸದಸ್ಯೆಯ ಪತಿ ಕೊಲೆಯಾದ ಸುಲೋಚನಾ ಜತೆ ಗೆಳೆತನವಿದ್ದುದು ಕೊಲೆಗೆ ಕಾರಣವಾಗಿರಬಹುದು. ಈ ಬಗ್ಗೆ ತನಿಖೆ ಮುಂದುವರಿದಿದೆ' ಎಂದು ಮಾಹಿತಿ ನೀಡಿದರು.

'ಕೊಲೆಯಾದ ಸುಲೋಚನಾ ಮೂಲತಃ ಭದ್ರಾವತಿಯವರು. ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮದ ಸುರೇಶ್ ಎಂಬವರನ್ನು ವಿವಾಹವಾಗಿದ್ದು, ಕೆಲ ವರ್ಷಗಳ ಹಿಂದೆ ಸುರೇಶ್ ಮೃತಪಟ್ಟಿದ್ದರು. ಸುಲೋಚನಾ ಅವರಿಗೆ ಇಬ್ಬರು ಮಕ್ಕಳಿದ್ದರು. ಆರೋಪಿ ನಗರಸಭಾ ಸದಸ್ಯೆಯ ಪತಿಯ ಜತೆ ಈಕೆಗೆ ಸ್ನೇಹವಿತ್ತು. ಕೊಲೆಯಾದ ದಿನ ಮನೆಯಲ್ಲಿ ಸುಲೋಚನಾ ಬಿಟ್ಟು ಬೇರೆ ಯಾರೂ ಇರಲಿಲ್ಲ. ಇದನ್ನು ಗಮನಿಸಿದ ದುಷ್ಕರ್ಮಿಗಳು ಸುಲೋಚನಾ ಅವರ ಮನೆಗೆ ನುಗ್ಗಿ  ಸಾಯಿಸಿದ್ದರು. ಈ ಬಗ್ಗೆ ಮಾರ್ಚ್,9  ರಂದು ಸುಲೋಚನಾ ಅವರ ಮಗಳು ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಸುದೀರ್ಘ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿದ್ದಾರೆ' ಎಂದು ಎಸ್‌ಪಿ ಚೇತನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ನಂಜನಗೂಡು  ಡಿವೈಎಸ್‌ಪಿ ಗೋವಿಂದರಾಜು, ಪಿಎಸ್‌ಐಗಳಾದ ವಿಜಯರಾಜ್, ಬಿ.ಮಹೇಂದ್ರ, ಟಿ.ಆರತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News