5 ಸಾವಿರ ಮಂದಿ ಕಾನ್‍ಸ್ಟೆಬಲ್‍ಗಳ ನೇಮಕಕ್ಕೆ ಶೀಘ್ರವೇ ಅಧಿಸೂಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-08-04 13:21 GMT

ಬೆಂಗಳೂರು, ಆ. 4: ‘ರಾಜ್ಯ ಗೃಹ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹೊಸದಾಗಿ 5 ಸಾವಿರ ಮಂದಿ ಕಾನ್‍ಸ್ಟೆಬಲ್ ಹುದ್ದೆ ನೇಮಕಾತಿ ಮಾಡಿಕೊಳ್ಳಲಾಗುವುದು. 545 ಪಿಎಸ್ಸೈ ಹುದ್ದೆಗಳ ನೇಮಕಾತಿ ರದ್ದುಪಡಿಸಿದ್ದು, 450 ಪಿಎಸ್ಸೈಗಳ ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲೆ ಆರಂಭಿಸಲಾಗುವುದು. ನಮ್ಮ ಅವಧಿಯಲ್ಲೇ ಹೇಗೆ ಪರೀಕ್ಷೆ ನಡೆಸಬೇಕೆಂಬುದನ್ನು ಮಾಡಿ ತೋರಿಸುತ್ತೇವೆ' ಎಂದು ನುಡಿದರು.

ವಯೋಮಿತಿ ಸಡಿಲಿಕೆ: ಪೊಲೀಸ್ ಸಬ್ ಇನ್‍ಸ್ಪೆಕ್ಟರ್ (ಪಿಎಸ್ಸೈ) ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. 545 ಪಿಎಸ್ಸೈ ಹುದ್ದೆಯ ನೇಮಕಾತಿ ಅಧಿಸೂಚನೆ ಅವರ ವಯಸ್ಸಿನಲ್ಲಿ ಸಡಿಲಿಕೆ ಮಾಡಿಕೊಡಲಾಗುವುದು. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಪಿಎಸ್ಸೈ ಹುದ್ದೆ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು' ಎಂದು ಅವರು ಮಾಹಿತಿ ನೀಡಿದರು.

ಪರೀಕ್ಷೆ ಬರೆಯಲು ಅವಕಾಶವಿಲ್ಲ: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರಿಗೆ ಮತ್ತೆ ಪರೀಕ್ಷೆ ಬರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. 545 ಪಿಎಸ್ಸೈ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು ಆಗುವುದಿಲ್ಲ. ಆದರೆ, ಆ ಹುದ್ದೆಗಳಿಗೆ ಹೊಸದಾಗಿ ಪರೀಕ್ಷೆ ನಡೆಸಲಾಗುವುದು' ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಜಾಮರ್ ಆಳವಡಿಕೆ: ‘ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಇನ್ನೂ ಎರಡೂ ಅಥವಾ ಮೂರು ತಿಂಗಳ ಒಳಗೆ ಜಾಮರ್ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೈದಿಗಳು ಯಾರಿಗೂ ಮೊಬೈಲ್‍ಫೋನ್ ಕರೆ ಮಾಡಲು ಅವಕಾಶ ಇರುವುದಿಲ್ಲ. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು' ಎಂದು ಅವರು ತಿಳಿಸಿದರು.

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳ ವಿಡಿಯೋ ನೋಡಿ ತುಂಬಾ ನೋವಾಯಿತು. ಹೀಗಾಗಿ ಕೂಡಲೇ ನಾನೇ ಖುದ್ದು ಕಾರಾಗೃಹಕ್ಕೆ ಭೇಟಿ ನೀಡಿ ಕ್ರಮ ತೆಗೆದುಕೊಂಡಿದ್ದು, 15 ಮಂದಿ ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ. 30 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೊಸ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ' ಎಂದು ವಿವರ ನೀಡಿದರು.

‘ರಾಜ್ಯದಲ್ಲಿ ಮಳೆ ಹಿನ್ನೆಲೆಯಲ್ಲಿ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿಗಳು ದಿನದ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿ ಇರಲು ಸೂಚನೆ ನೀಡಲಾಗಿದೆ. ಎಲ್ಲೆ ಮಳೆಯಿಂದ ಅನಾಹುತವಾದರೆ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಟಾಧಿಕಾರಿಗಳಿಗೂ ಸೂಚನೆ ರವಾನಿಸಲಾಗಿದೆ. ಸ್ಥಳೀಯ ಆಡಳಿತದ ಜೊತೆ ಪ್ರವಾಹ, ಮಳೆ ಅವಾಂತರ ನಿಭಾಯಿಸಲು ತಿಳಿಸಲಾಗಿದೆ'

-ಆರಗ ಜ್ಞಾನೇಂದ್ರ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News