ಬಿಜೆಪಿ ಶಾಸಕ ಪ್ರೀತಂ ಗೌಡ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ; ಎಸ್ಪಿಗೆ ದೂರು, ರಕ್ಷಣೆ ನೀಡುವಂತೆ ಮನವಿ

Update: 2022-08-04 13:45 GMT

ಹಾಸನ: ಶಾಸಕ ಪ್ರೀತಂ ಗೌಡ ಅವರ ಬೆಂಬಲಿಗರಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಹಾಗೂ ರಕ್ಷಣೆ ನೀಡುವಂತೆ ಆಗ್ರಹಿಸಿ ಅಗಿಲೆ ಯೋಗೀಶ್ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ. 

ಗುರುವಾರ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಯೋಗೀಶ್, ' ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಬೆಂಬಲಿಗರಿಂದ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಈ ಹಿಂದೆ ಅನೇಕ ಬಾರಿ ಸಂಬಂದಿಸಿದ ಪೊಲೀಸ್ ಠಾಣೆ ಹಾಗೂ ಎಸ್ಪಿ ಕಚೇರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೂತನ ಎಸ್ಪಿಯಾದರೂ ತನಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದೇನೆ' ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಮಾಡಿದಾಗ ಸ್ಥಳೀಯ ಶಾಸಕರು ಹಾಗೂ ಅವರ ಬೆಂಬಲಿಗರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೆ. ಇದೀಗ ತಾನು ಹೊಸ ಪಕ್ಷ ಸೇರಲು ತೀರ್ಮಾನಿಸಲಾಗಿದ್ದು, ಶಾಸಕರ ಬೆಂಬಲಿಗರಾದ ಹಂದಿನಕೆರೆ ಗ್ರಾಮದ ಚೇತು, ಶುಂಠಿ ಕುಮಾರ, ಮಂಡಿಗನ ಹಳ್ಳಿ ಜೆಸಿಬಿ ಕುಮಾರ ಎಂಬುವವರು ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದು, ಇವರೆಲ್ಲ ರೌಡಿಸಂ ಮಾಡಿಕೊಂಡು ಜನರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದಾರೆ ಇವರು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅವರನ್ನು ಶಾಸಕರು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ,  ತಕ್ಷಣ ಪೊಲೀಸ್ ಇಲಾಖೆ ಇವರನ್ನು ರೌಡಿ ಶೀಟರ್ ಲೀಸ್ಟ್ ಗೆ ಸೇರಿಸಬೇಕು ಹಾಗೂ ಕೂಡಲೇ ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. 

'ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಗಿಲೆ ಯೋಗೀಶ್ ಅವರು ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಬೆದರಿಕೆ ಕರೆಗಳು ಯಾವ ಕಾರಣಕ್ಕಾಗಿ ಹಾಗೂ ಯಾರಿಂದ ಬರುತ್ತಿದೆ ಎಂದು ತನಿಖೆ ನಡೆಸಿ ಅಗತ್ಯವಿದ್ದರೆ ಹಾಗೂ ಕಾನೂನಿನ ಅಡಿಯಲ್ಲಿ ಅವರಿಗೆ ಪೊಲಿಸ್ ಭದ್ರತೆ ಒದಗಿಸುವ ಅವಕಾಶ ಇದ್ದಲ್ಲಿ ಒದಗಿಸಲಾಗುವುದು'

- ಹರಿರಾಮ್ ಶಂಕರ್ , ಪೊಲೀಸ್ ವರಿಷ್ಠಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News