ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ; ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡುವಂತೆ ಸೂಚನೆ

Update: 2022-08-04 14:24 GMT

ಬೆಂಗಳೂರು, ಆ.4: ‘ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ನಾಯಕರಾದವರು ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡಬೇಕು. ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಅವರನ್ನು ದೂರ ಮಾಡಬೇಡಿ’ ಎಂದುರಾಜ್ಯದ ಬಿಜೆಪಿ ನಾಯಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಖಾಸಗಿ ಹೊಟೇಲ್‍ನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಸಿಐಐ ವತಿಯಿಂದ ಆಯೋಜಿಸಲಾಗಿದ್ದ ‘ಸಂಕಲ್ಪದಿಂದ ಸಿದ್ದಿ’ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬುಧವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ, ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ ಜೊತೆ ಈ ವಿಚಾರದ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.

ಗುರುವಾರ ಬೆಳಗ್ಗೆ ತಾವು ವಾಸ್ತವ್ಯ ಹೂಡಿದ್ದ ಹೊಟೇಲ್‍ ನಲ್ಲಿ ತಮ್ಮನ್ನು ಭೇಟಿಯಾದ ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇನ್ನಿತರ ನಾಯಕರ ಜೊತೆ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಬಿಜೆಪಿ ಯುವ ಮೋರ್ಚಾಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ನಮ್ಮ ಪಕ್ಷದಕಾರ್ಯಕರ್ತರ ಕಗ್ಗೊಲೆಯಾಗುತ್ತಿರುವುದು ಸರಿಯಲ್ಲಎಂದು ಬೇಸತ್ತು, ರಾಜ್ಯದ ಹಲವು ಜಿಲ್ಲೆಗಳ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡಿದರ ಬಗ್ಗೆ ಮಾಜಿ ಸಚಿವಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರರು ನೀಡಿರುವ ಹೇಳಿಕೆಯಿಂದ ಪಕ್ಷಕ್ಕೆಆಗಿರುವ ಮುಜುಗರದ ಬಗ್ಗೆಯೂ ಪ್ರಸ್ತಾಪಿಸಲಾಗಿದೆಎಂದು ತಿಳಿದು ಬಂದಿದೆ.

ನಮ್ಮದು ಕಾರ್ಯಕರ್ತರ ಪಕ್ಷ, ಅವರನ್ನೆ ಕಡೆಗಣಿಸಿ ನಾಯಕರು ಹೇಳಿಕೆಗಳನ್ನು ನೀಡುವುದು ಸರಿಯೆ?ಎಂದು ಪ್ರಶ್ನಿಸಿದ ಅಮಿತ್ ಶಾ, ಭವಿಷ್ಯದಲ್ಲಿ ಕಾರ್ಯಕರ್ತರ ಬಗ್ಗೆ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆ ವಹಿಸಿ. ಚುನಾವಣೆ ಎದುರು ಇರುವ ಸಂದರ್ಭದಲ್ಲಿ ಕಾರ್ಯಕರ್ತರನ್ನು ಕಳೆದುಕೊಂಡರೆ ಜನತೆಗೆ ಪಕ್ಷದ ವತಿಯಿಂದ ಎಂತಹ ಸಂದೇಶ ಹೋಗಬಹುದು ಎಂಬುದನ್ನುಅರ್ಥ ಮಾಡಿಕೊಳ್ಳಿ, ನಿಮ್ಮ ಜವಾಬ್ದಾರಿಗಳನ್ನು ಅರ್ಥೈಸಿಕೊಂಡು ಕೆಲಸ ಮಾಡಿಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಸುಳಿವು ನೀಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ ಅವರನ್ನು ಭೇಟಿ ಮಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ತಮ್ಮಿಂದ ತೆರವಾಗಲಿರುವ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದೂ ತಿಳಿದು ಬಂದಿದೆ.

ಇದೇ ವೇಳೆ, ರಾಜ್ಯದ ವಿರುದ್ಧದ 40 ಪರ್ಸೆಂಟ್‍ ಕಮಿಷನ್‍ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್‍ ಆತ್ಮಹತ್ಯೆ, ಪೊಲೀಸ್ ಸಬ್‍ ಇನ್‍ಸ್ಪೆಕ್ಟರ್ ಅಕ್ರಮ ನೇಮಕಾತಿ, ನಿನ್ನೆ ದಾವಣಗೆರೆಯಲ್ಲಿ ನಡೆದಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆಯೂ ಅಮಿತ್ ಶಾ ಬಿಜೆಪಿ ನಾಯಕರಿಂದ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಲ್ಲಿನ ಕಾರ್ಯಕರ್ತರು ಘೋಷಣೆ ಕೂಗಿರುವುದು, ಅವರ ವಾಹನವನ್ನು ತಳ್ಳಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿತ್ತು. ಸ್ವಕ್ಷೇತ್ರದಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು, ಅವರನ್ನು ಸಮಾಧಾನಗೊಳಿಸಲು ಸಾಧ್ಯವಾಗದೆ ಇರುವ ಕುರಿತು ಈ ವೇಳೆ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News