ರಾಜ್ಯದಲ್ಲಿ ಭಾರೀ ಮಳೆಗೆ 64 ಮಂದಿ ಸಾವು: ಸಚಿವ ಆರ್‌.ಅಶೋಕ್‌

Update: 2022-08-05 13:32 GMT
ಕೆ.ಆರ್.ಪೇಟೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು

ಮಂಡ್ಯ, ಆ.4: ಕಂದಾಯ ಇಲಾಖೆಯಲ್ಲಿ  ಹೊಸ ಸಾಫ್ಟ್ ವೇರ್ ಹಾಗು ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ ಪರಿಹಾರವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗು ಸ್ಥಳೀಯ ಶಾಸಕರಾದ ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಕೆ.ಆರ್.ಪೇಟೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರ ಒಂದು ತಿಂಗಳೊಳಗೆ ನೀಡುತ್ತಿದ್ದು, 2 ಸಾವಿರ ಕೋಟಿ ಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವಂತಹ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಜೂನ್‍ನಿಂದ 4ನೇ ಆಗಸ್ಟ್ ವರೆಗೆ 14 ಜಿಲ್ಲೆಗಳು, 115 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು, 14,902 ಮಂದಿ ಪ್ರವಾಹ ಪೀಡಿತರಾಗಿದ್ದಾರೆ. 64 ಜನ ಸಾವನ್ನಪ್ಪಿದ್ದು, ಇದರಲ್ಲಿ ಸಿಡಿಲು ಬಡಿತದಿಂದ 16, ಮರ ಬಿದ್ದು 4 ಜನ, ಮನೆ ಕುಸಿತದಿಂದ 15 ಜನ, ಪ್ರವಾಹದ ಸೆಳತಕ್ಕೆ ಸಿಕ್ಕಿ 19 ಜನ, ಭೂ ಕುಸಿತದಿಂದ 9, ವಿದ್ಯುತ್ ಅಪಘಾತದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇಡೀ ರಾಜ್ಯದಲ್ಲಿ 608 ಮನೆಗಳು ಸಂಪೂರ್ಣವಾಗಿ, 2,445 ತೀವ್ರವಾಗಿ, 15,074 ಭಾಗಶಃ ಹಾನಿಯಾಗಿವೆ. ಒಟ್ಟು 8,057 ಜನರನ್ನು ಸ್ಥಳಾಂತರ ಮಾಡಲಾಗಿದೆ. ಅವಶ್ಯಕವಿರುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ 6,933 ಜನರು ಆಶ್ರಯ ಪಡೆದಿದ್ದು, ಅವರಿಗೆ  ಗುಣಮಟ್ಟದ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗು ರಾತ್ರಿ  ಊಟ ನೀಡಲಾಗುತ್ತಿದೆ. ಮೊಟ್ಟೆ ಸಹ ನೀಡಲು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಮಳೆ ಹಾನಿ ಪರಿಹಾರ ಹೆಚ್ಚಳಕ್ಕಾಗಿ ರೈತರು ಸಲ್ಲಿಸಿರುವ ಮನವಿಗೆ ಸರಕಾರ ಸ್ಪಂದಿಸಿ ಪರಿಹಾರವನ್ನು ಹೆಚ್ಚಳ ಮಾಡಿದೆ. ಮಳೆಹಾನಿಗೆ ಒಳಗಾದವರಿಗೆ ಡ್ರೈ ಕಿಟ್ ವಿತರಣೆ ಮಾಡುವಂತಹ  ಹೊಸ ಯೋಜನೆಯನ್ನು ಕೆಲವೇ ದಿನಗಳಲ್ಲಿ ಜಾರಿಗೆ ತರಲಾಗುವುದು. ಮಳೆಹಾನಿ ಒಳಗಾದ ಪ್ರದೇಶದಲ್ಲಿ  ವೇಗವಾಗಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ 168 ಹೆಕ್ಟೇರ್ ಬೆಳೆ ಹಾನಿ: ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಸುಮಾರು 30 ಮನೆಗಳು ಸಂಪೂರ್ಣ ಹಾನಿಯಾಗಿದ್ದು,  ಭಾಗಶಃ 176 ಮನೆ ಹಾನಿಯಾಗಿದೆ. 46 ಜಾನುವಾರುಗಳು, 168 ಹೆಕ್ಟೇರ್ ಕೃಷಿ ಬೆಳೆ, 32 ಹೆಕ್ಟೇರ್ ತೋಟಗಾರಿಕೆ ಬೆಳೆ, 85 ಕಿ.ಮೀ ರಸ್ತೆಗಳು, 37 ಸೇತುವೆ, 9 ಶಾಲೆಗಳು 319 ವಿದ್ಯುತ್ ಕಂಬಗಳು ಹಾನಿಯಾಗಿವೆ. ಮಂಡ್ಯ ತಾಲೂಕಿನಲ್ಲಿ 5 ಕೆರೆಗಳು, ಮದ್ದೂರಿನಲ್ಲಿ 3 ಕೆರೆಗಳು, ನಾಗಮಂಗಲದಲ್ಲಿ 1 ಕೆರೆ, ಕೆ.ಆರ್.ಪೇಟೆ ತಾಲೂಕಿನಲ್ಲಿ 5 ಕೆರೆಗಳಿಗೆ ಹಾನಿಯಾಗಿದೆ ಎಂದು ಅಶೋಕ್ ಹೇಳಿದರು.

ಮಾವಿನಕಟ್ಟೆ ಕೊಪ್ಪಲುವಿನಲ್ಲಿ ಕೆರೆ ಒಡೆದಿರುವುದನ್ನು  ಪರಿಶೀಲಿಸಿ ನೀರು ಹೊರ ಹೋಗದಂತೆ ಕೂಡಲೇ ಮರಳಿನ ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸುವಂತೆ ಸೂಚಿಸಿದರು. ಆಘಾಲಯದಲ್ಲಿ ಕೆರೆ ಕೋಡಿ ಒಡೆದಿರುವುದನ್ನು ಪರಿಶೀಲಿಸಿದರು. ಇದೇ ವೇಳೆ ಆಘಾಲಯದಲ್ಲಿ ಭಾರಿ ಮಳೆಯಿಂದ ಮನೆ ಹಾನಿಯಾದವರಿಗೆ ಸ್ಥಳದಲ್ಲೇ ತಲಾ ಒಂದು ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಅಲ್ಲದೇ ಬಾಕಿ ಇರುವ ಪರಿಹಾರವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಎಸ್. ಅಶ್ವತಿ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News