CET ರ‍್ಯಾಂಕ್ ವಿವಾದ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
Update: 2022-08-04 22:24 IST
ಬೆಂಗಳೂರು, ಆ.4: ಪ್ರಸಕ್ತ ವರ್ಷ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗಷ್ಟೇ ಪಿಯು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕ್ ನೀಡುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಿಇಟಿ ರ‍್ಯಾಂಕ್ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ನಗರದ ಜಿ.ಮನಸ್ವಿನಿ ಹಾಗೂ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ.8ಕ್ಕೆ ಮುಂದೂಡಿದೆ.
ಸರಕಾರದ ಪರ ವಕೀಲರು ಜು.30ರ ಆದೇಶ ಆಧರಿಸಿ ಯಾವುದೇ ಸಿಇಟಿ ಪ್ರಕ್ರಿಯೆ ಮುಂದುರಿಸುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಸೂಚಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.