ವಿಧಾನಸಭೆ ಚುನಾವಣೆ; ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಿಸಾನ್ ಕಾಂಗ್ರೆಸ್ ಮನವಿ
ಚಿಕ್ಕಮಗಳೂರು, ಆ.4: ಶಾಸಕ ಸಿ.ಟಿ.ರವಿ ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕತೂಹಲ ಜಿಲ್ಲಾದ್ಯಂತ ವ್ಯಾಪಕ ಚರ್ಚೆಯಲ್ಲಿದೆ. ಈ ಮಧ್ಯೆ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಸಾನ್ ಕಾಂಗ್ರೆಸ್ ಮನವಿ ಮಾಡಿದೆ.
ಆ.3ರಂದು ದಾವಣಗೆರೆ ನಗರದಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್‍ನ ರಾಜ್ಯಾದ್ಯಂತ ಸಚಿನ್ ಮೀಗಾ ನೇತೃತ್ವದ ತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದು, ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಮನವಿಯೊಂದನ್ನು ಸಲ್ಲಿಸಿರುವ ಕಿಸಾನ್ ಕಾಂಗ್ರೆಸ್ ಮುಖಂಡರು, ಬರಲಿರುವ ವಿಧಾಸಭೆ ಚುನಾವಣೆ ಸಂದರ್ಭ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಸಿ.ಟಿ.ರವಿ ಅವರ ಆಡಳಿತ ವೈಖರಿಯಿಂದಾಗಿ ಚಿಕ್ಕಮಗಳೂರು ಕ್ಷೇತ್ರದ ಜನತೆ ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಮನವಿಯಲ್ಲಿ ಕಿಸಾನ್ ಕಾಂಗ್ರೆಸ್ ಮುಖಂಡರು ಕೇಳಿಕೊಂಡಿದ್ದಾರೆ. ಕಿಸಾನ್ ಕಾಂಗ್ರೆಸ್ ಮುಖಂಡರ ಮನವಿಗೆ ಸ್ವೀಕರಿಸಿದ ಸಿದ್ದರಾಮಯ್ಯ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆಂದು ತಿಳಿದು ಬಂದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭ ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜಿಲ್ಲೆಯವರೇ ಆಗಿರುವ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರು ಮನವಿ ಮಾಡಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.