ಪಿಎಸ್ಐ ಹಗರಣ: ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಎಂಟು ಮಂದಿ ಅಭ್ಯರ್ಥಿಗಳ ಬಂಧನ

Update: 2022-08-05 14:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.5: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಲಿಖಿತ ಪರೀಕ್ಷೆಯಲ್ಲಿ ಮೊದಲನೆ ರ‍್ಯಾಂಕ್ ಬಂದಿದ್ದ ಅಭ್ಯರ್ಥಿ ಸೇರಿ ಎಂಟು ಮಂದಿ ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರ್ಯಾಂಕ್ ಪಡೆದಿದ್ದ, ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್‍ಸ್ಟೆಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಹೈ–ಕ ಕೋಟಾದಲ್ಲಿ 22ನೆ ರ್ಯಾಂಕ್‍ಪಡೆದಿದ್ದ ಅಫಜಲಪುರ ತಾಲೂಕಿನ ಗೌರ(ಬಿ) ಗ್ರಾಮದಸಿದ್ದುಗೌಡಶರಣಪ್ಪಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು ಎಂದು ಪೊಲೀಸರು ಗುರುತಿಸಿದ್ದಾರೆ.

ಎಂಟೂ ಅಭ್ಯರ್ಥಿಗಳು ಕಳೆದ ಅ.3ರಂದು ನಡೆದ ಪರೀಕ್ಷೆಯಲ್ಲಿ ಪಾಸಾಗಿದ್ದರು. ಹಗರಣದ ಪ್ರಮುಖ ಕಿಂಗ್‍ಪಿನ್ ಆರ್.ಡಿ. ಪಾಟೀಲ ಬ್ಲೂಟೂತ್ ಬಳಸಿ ಇವರನ್ನು ಪಾಸ್ ಮಾಡಿಸಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್‍ಐಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಅಭ್ಯರ್ಥಿಗಳನ್ನು ಬಂಧಿಸಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News