ತಪ್ಪು ಮಾಡದ ವ್ಯಕ್ತಿಯ ಬಂಧನ: 5 ಲಕ್ಷ ರೂ.ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ

Update: 2022-08-05 17:01 GMT

ಬೆಂಗಳೂರು, ಆ.5: ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್, ಬಂಧಿತ ವ್ಯಕ್ತಿಗೆ ರಾಜ್ಯ ಸರಕಾರವು 5 ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಕರಣದ ತನಿಖೆಯೊಂದರಲ್ಲಿ ತಮ್ಮನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ‘ಇಂಡಿಯಾ ಹಾಲಿಡೇ ಪ್ರೈ.ಲಿ.’ ಸಂಸ್ಥೆಯ ಅಧಿಕಾರಿ ಎನ್.ನಿಂಗರಾಜ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಬಂಧಿತ ವ್ಯಕ್ತಿಗೆ ರಾಜ್ಯ ಸರಕಾರವು 5 ಲಕ್ಷ ರೂ.ಪರಿಹಾರ ನೀಡಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಯಿಂದ ಈ ಹಣವನ್ನು ಸರಕಾರ ಭರಿಸಿಕೊಳ್ಳಬಹುದು ಎಂದು ಸೂಚಿಸಿದೆ. 

ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಯಾವುದೇ ಪ್ರಕರಣದಡಿ ವಾರಂಟ್ ಸಹಿತ ಆರೋಪಿಯನ್ನು ಬಂಧಿಸುವಾಗ ಆ ವ್ಯಕ್ತಿಯ ಸರಿಯಾದ ಗುರುತನ್ನು ಪತ್ತೆ ಹಚ್ಚಿ ದಾಖಲೆಗಳನ್ನು ಪರಿಶೀಲಿಸಬೇಕು. ಜತೆಗೆ ಬಂಧಿಸಬಹುದಾದ ವ್ಯಕ್ತಿ ಇವರೇ ಎಂದು ಸಾಧ್ಯವಿದ್ದ ಎಲ್ಲ ಮೂಲಗಳಿಂದ ಖಚಿತಪಡಿಸಿಕೊಂಡ ನಂತರವೇ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಬೇಕೆಂದು ನಿರ್ದೇಶನ ನೀಡಿದೆ.

ವ್ಯಕ್ತಿಯನ್ನು ಬಂಧಿಸುವಾಗಿನ ನಿಯಮಗಳನ್ನು ಪಾಲಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆಯೇ ಎಂಬುವ ಬಗ್ಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆಯೂ ನ್ಯಾಯಪೀಠವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News