ದಾವಣಗೆರೆ: ರಾಜಸ್ತಾನ ಮೂಲದ ಸೈಬರ್ ವಂಚಕನ ಬಂಧನ
ದಾವಣಗೆರೆ.ಆ.5 : ರಾಜಸ್ತಾನ ಮೂಲದ ಸೈಬರ್ ವಂಚಕನನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದು, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ , ದೂರುದಾರರಿಗೆ ಮತ್ತು ಇತರೆ ಸಾರ್ವಜನಿಕರಿಗೆ ವಂಚಿಸಿ ಖರೀದಿಸಿದ್ದ ಅಂದಾಜು 1.5 ಲಕ್ಷ ಮೌಲ್ಯದ 3 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಿಪ್ ಕಾರ್ಟ್ ಪೇ ಲೇಟರ್ ಖಾತೆಯನ್ನು ಹೊಂದಿದ್ದ ದಾವಣಗೆರೆಯ ರಕ್ಷಿತ್ ಬಿ . ಅವರು ಇದೇ ವರ್ಷ ಜ.21 ರಂದು ಯಾರೋ ಅಪರಿಚಿತರು ತನ್ನ ಖಾತೆಯನ್ನು ಹ್ಯಾಕ್ ಮಾಡಿ 45,000 ರೂ.ಗಳನ್ನು ವಂಚಿಸಿರುವುದಾಗಿ ನೀಡಿದ ದೂರಿನನ್ವಯ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರನ್ನು ಆಧರಿಸಿ ಕಾರ್ಯಾಚರಣೆಗಿಳಿದ ತಂಡ ವಂಚಕನ ಜಾಡನ್ನು ಪತ್ತೆ ಹಚ್ಚಿ ದೂರದ ರಾಜಸ್ಥಾನದ ಅಲ್ವಾರನಗರದಲ್ಲಿದ್ದ ವಂಚಕ ಅಮರ್ ತಿವಾರಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಲ್ಲಿಂದ ದಾವಣಗೆರೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ , ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಾಂಶಗಳ ಬಳಕೆಯಲ್ಲಿ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟಿ. ಈ ಮಾತನ್ನು ಪೊಲೀಸ್ ಇಲಾಖೆ ಸಾಕಷ್ಟು ಬಾರಿ ಹೇಳುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಸಹ ಸೈಬರ್ ವಂಚಕರ ಜಾಲದಿಂದ ನಡೆಯುವ ಅಪರಾಧಗಳು ದಿನೇ ದಿನೇ ಹೆಚ್ಚುತ್ತಲೇ ಇವೆ . ಈ ರೀತಿ ವಂಚಕರ ಜಾಡಿಗೆ ಬಲಿಯಾಗುತ್ತಿರುವವರು ವಿದ್ಯಾವಂತರೇ ಆಗಿದ್ದಾರೆ ಎಂದು ತಿಳಿಸಿದ ವರಿಷ್ಠಾಧಿಕಾರಿಗಳು, ಸಾಕಷ್ಟು ಜನ ಅಂತರ್ಜಾಲದಲ್ಲಿ ತಾವು ಬಳಸುವ ನಾನಾ ವೆಬ್‍ಸೈಟ್ ಮತ್ತು ಅಪ್ಲಿಕೇಶ್‍ಗಳಿಗೆ ಒಂದೇ ಪಾಸ್ ವರ್ಡ್ ಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಹ್ಯಾಕರ್ಸ್‍ಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದರು.
ವಂಚಕರ ಜಾಲವು ಸಾರ್ವಜನಿಕರ ಸಾಮಾಜಿಕ ಜಾಲತಾಣಗಳು, ಈ - ಮೇಲ್ ಹಾಗೂ ಯುಪಿಐ ಖಾತೆಗಳನ್ನು ವಿವಿಧ ತಂತ್ರಾಂಶಗಳ ಮೂಲಕ ಹ್ಯಾಕ್ ಮಾಡಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಯಿರುವುದರಿಂದ ಸಾರ್ವಜನಿಕರು ತಮ್ಮ ಸಾಮಾಜಿಕ ಜಾಲತಾಣಗಳ ಇ - ಮೇಲ್ , ಹಾಗೂ ಯುಪಿಐ ಖಾತೆಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ ಅಳವಡಿಸಿಕೊಳ್ಳಬೇಕು. ತಮ್ಮ ಖಾತೆಗಳಿಗೆ ಬೇರೆ ಬೇರೆಯದೇ ಪಾಸ್ವರ್ಡ್ ಅಳವಡಿಸಿಕೊಳ್ಳಬೇಕು. ಎಲ್ಲ ಅಕೌಂಟ್ ಗಳಿಗೆ ಒಂದೇ ಪಾಸ್‍ವರ್ಡ್ ಬಳಸಬಾರದು. ಅನಾವಶ್ಯಕ ಆಪ್‍ಗಳನ್ನು ಇನ್ಸಾಟಲ್ ಮಾಡಬಾರದು. ಹೊಸದಾಗಿ ಲಕ್ಕಿ ಡ್ರಾ ಎಂಬ ಆಪ್‍ಗಳ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಡಿಸಿಆರ್ ಬಿ ಘಟಕದ ಡಿವೈಎಸ್ ಪಿ ಬಸವರಾಜ್ ಅವರ ನೇತೃತ್ವದಲ್ಲಿ ವಂಚಕನ ಜಾಡು ಬೆನ್ನುಹತ್ತಿದ ಸಿಇಎನ್ ಅಪರಾಧ ಠಾಣೆ ಪಿಎಸ್‍ಐ ಪರಮೇಶ್ ಡಿ.ಜಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ್ , ಮಾರುತಿ, ಮುತ್ತುರಾಜ್,ಮಲ್ಲಿಕಾರ್ಜುನ ಹಾದಿಮನಿ ಅವರನ್ನೊಳಗೊಂಡ ತಂಡ , ರಾಜಸ್ಥಾನ ರಾಜ್ಯದ ಅಲ್ವಾರ ನಗರದಲ್ಲಿ ಆರೋಪಿ ಅಮನ್ ತಿವಾರಿಯನ್ನು ಬಂಧಿಸಿ ಕರೆತಂದಿದೆ.
ಸಿಇಎನ್ ಠಾಣೆಯಲ್ಲಿ 2018 ರಲ್ಲಿ 10 ಪ್ರಕರಣ ದಾಖಲಾಗಿದ್ದು, ಅದರಲ್ಲಿ 9 ಪತ್ತೆ ಹಚ್ಚಲಾಗಿದೆ. 2019 ರಲ್ಲಿ 40 ಪಕರಣ ದಾಖಲಾಗಿದ್ದು ಅದರಲ್ಲಿ 25 ಪತ್ತೆ, 2020 ರಲ್ಲಿ 39 ಪ್ರಕರಣ ದಾಖಲಿಸಿದ್ದು 31 ಪತ್ತೆಯಾಗಿದೆ. 2021 ರಲ್ಲಿ 66 ಪ್ರಕರಣದಲ್ಲಿ 44 ಪತ್ತೆಯಾಗಿದೆ. 2022ರಲ್ಲಿ ಆರು ತಿಂಗಳಲ್ಲಿ 44 ಪ್ರಕರಣ ದಾಖಲಾಗಿದ್ದು ಅದರಲ್ಲಿ 23 ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದ ಅವರು, ವಿದ್ಯಾವಂತರೇ ಜಾಸ್ತಿ ಇಂತಹ ಜಾಲಗಳಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಅದ್ದರಿಂದ ಇಂತಹ ಪ್ರಕರಣ ನಡೆದ ತಕ್ಷಣವೇ 112 ದೂರು ನೀಡದರೆ ಪ್ರಕರಣ ಶೀಘ್ರವೇ ಪತ್ತೆ ಹಚ್ಚಬಹುದಾಗಿದೆ ಎಂದರು.
ಆರೋಪಿಯನ್ನು ಪ್ರಕರಣದಲ್ಲಿ ಆರೋಪಿಯ ಪತ್ತೆ ಮತ್ತು ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಸಿ.ಬಿ. ರಿಷ್ಯಂತ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ. ಬಸರಗಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಎಎಸ್ಪಿ ಆರ್.ಬಿ. ಬಸರಗಿ, ಡಿವೈಎಸ್‍ಪಿ ಬಸವರಾಜ್, ಸಿಪಿಐ ಮಂಜುನಾಥ, ಪಿಎಸ್‍ಐ ಪರಮೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.