ಹೊಸದುರ್ಗ: ಭಾರೀ ಮಳೆಗೆ ಕೋಡಿಬಿದ್ದ ಬಲ್ಲಾಳಸಮುದ್ರ ಕೆರೆ
ಹೊಸದುರ್ಗ, ಆ.5: ತಾಲೂಕಿನ ಐತಿಹಾಸಿಕ ದೊಡ್ಡ ಕೆರೆಯಾದ ಬಲ್ಲಾಳಸಮುದ್ರ ಕೆರೆಯು ಭಾರೀ ಮಳೆಗೆ ಶುಕ್ರವಾರ ಕೋಡಿ ಬಿದ್ದು ಹರಿಯುತ್ತಿದೆ.
ಕಳೆದ 5 ದಿನಗಳಿಂದ ಹೊಸದುರ್ಗ ತಾಲೂಕು ಸೇರಿ ನೆರೆಯ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ವ್ಯಾಪ್ತಿಯ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಬಲ್ಲಾಳಸಮುದ್ರ ಕೆರೆಯತ್ತ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದಾಗಿ ಹಲವು ವರ್ಷಗಳ ಬಳಿಕ ಕೆರೆ ಭರ್ತಿಯಾಗಿ ಕೋಡಿಬಿದ್ದಿದೆ. ಕೋಡಿಯ ನೀರು ಭೋರ್ಗರೆಯುತ್ತಾ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಯುತ್ತಿದೆ. ಕೆರೆ ಭರ್ತಿಯಾಗಿರುವ ಸೊಬಗು ಕಣ್ಣುತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಕೆರೆಯತ್ತ ಬರುತ್ತಿದ್ದಾರೆ.
ಹಲವು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿರುವುದರಿಂದ ಈ ಭಾಗದ ರೈತರಿಗೆ ಸಂತಸ ಉಂಟಾಗಿದೆ. ತೆಂಗು, ಅಡಿಕೆ ತೋಟಗಳಿಗೆ ಹೆಚ್ಚು ಅನುಕೂಲ ಆಗಿದೆ. ಈ ಭಾಗದಲ್ಲಿ ಸಾಕಷ್ಟು ಅಂತರ್ಜಲವು ವೃದ್ಧಿಯಾಗಿದ್ದು ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಇದರಿಂದಾಗಿ ತೆಂಗು, ಅಡಿಕೆ ಸೇರಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಹಾಗೂ ಜನ, ಜಾನುವಾರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಬಲ್ಲಾಳಸಮುದ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಟಿ.ಫಾಲಾಕ್ಷಪ್ಪ ತಿಳಿಸಿದ್ದಾರೆ.