×
Ad

ಚಿಕ್ಕಮಗಳೂರು: ಭಾರೀ ಮಳೆಗೆ ಮಲೆನಾಡು ಭಾಗದ ವಿವಿಧೆಡೆ ಭೂಕುಸಿತ

Update: 2022-08-05 19:18 IST

ಚಿಕ್ಕಮಗಳೂರು, ಆ.5: ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಅಬ್ಬರಿಸುತ್ತಿದ್ದು, ಕಳೆದ ಮೂರು ದಿನಗಳಿಂದ ಕಾಫಿನಾಡಿನಾದ್ಯಂತ ಅಲ್ಲಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಹರಿಯುವ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಎಡಬಿಡದೇ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ 2-3 ದಿನಗಳಿಂದ ಜಿಲ್ಲಾದ್ಯಂತ ಮತ್ತೆ ಮಳೆಯಾಗುತ್ತಿದ್ದು, ಗುರುವಾರ ರಾತ್ರಿಯಿಂದ ಎಡಬಿದೇ ಮಳೆಯಾಗುತ್ತಿದೆ. ಮಲೆನಾಡು ಭಾಗದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿಕೊಂ ಡಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭತ್ತದ ನಾಟಿ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಅಡಿಕೆ, ಕಾಳುಮೆಣಸು ಮತ್ತು ಕಾಫಿಗೆ ಕೊಳೆ ರೋಗದ ಭೀತಿ ಎದುರಾಗಿದೆ.

ಮೂಡಿಗೆರೆ ತಾಲೂಕಿನ ಬಣಕಲ್ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದ್ದು, ಶುಕ್ರವಾರ ಮುಂಜಾನೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ಕಾರು ಕೇರಳ ಮೂಲದ್ದೆಂದು ತಿಳಿದು ಬಂದಿದೆ. ಕಾರು ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.

ಕಡೂರು ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ನಿಡುವಳ್ಳಿ ಗ್ರಾಮದಲ್ಲಿದ್ದ ಕೆಲ ಮನೆಗಳಿಗೆ ನೀರುನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಯಾಗಿವೆ. ಭಾರೀ ಮಳೆಯಿಂದ ರಾತ್ರಿಯೆಲ್ಲ ಜನರು ಪರದಾಡಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಜೋರಾಗಿದ್ದು, ಬಯಲು ಪ್ರದೇಶವಾದ ಚಿಕ್ಕಮಗಳೂರು ತಾಲೂಕಿನ ಕೆಲವು ಹೋಬಳಿಗಳೂ ಸೇರಿದಂತೆ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಸಾಧರಣ ಮಳೆಯಾಗುತ್ತಿದೆ. ಕಳೆದ 3-4 ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂದಿನ 2-3 ದಿನಗಳ ಕಾಲ ಭಾರೀ ಮಳೆ ಮುಂದುವರಿಯುವ ಬಗ್ಗೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳಸ ತಾಲೂಕಿನ ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿರುವ ಕವನಹಳ್ಳ ಸಮೀಪದ ಕಳ್ಳರಪಾಲು ಗ್ರಾಮದ ನಿವಾಸಿಗಳಾದ ವನಿತಾ, ಉದಯ್ ದಂಪತಿಗೆ ಸೇರಿದ ಮನೆ ಸಮೀಪದಲ್ಲಿ ಭಾರೀ ಮಳೆಯಿಂದಾದ ಧರೆ ಕುಸಿದು ವಾಸದ ಮನೆಗೆ ಹಾನಿಯಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಂತಹಂತವಾಗಿ ಧರೆ ಕುಸಿಯುತ್ತಿದ್ದು, ಮನೆ ಸಂಪೂರ್ಣವಾಗಿ ಕುಸಿಯುವ ಭೀತಿಯಿಂದಾಗಿ ಕುಟುಂಬಸ್ಥರು ಮನೆಯಲ್ಲಿದ್ದ ವಸ್ತುಗಳನ್ನು ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಧರೆ ಕುಸಿತದಿಂದಾಗಿ ದಂಪತಿಗೆ ಸೇರಿರುವ ಕಾಫಿ, ಅಡಿಕೆ ತೋಟಕ್ಕೂ ಹಾನಿಯಾಗಿದೆ. ಅಲ್ಲದೇ ಗ್ರಾಮ ಸಂಪರ್ಕದ ರಸ್ತೆಯಲ್ಲೂ ಭೂ ಕುಸಿತ ಉಂಟಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕುಟುಂಬಸ್ಥರು ಜಿಲ್ಲಾಡಳಿತದ ನೆರವಿನ ನಿರೀಕ್ಷೆಯಲ್ಲಿದ್ದು, ಸ್ಥಳಕ್ಕೆ ಹೊರನಾಡು ಗ್ರಾಪಂ ಪಿಡಿಒ, ಕಳಸ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆ ವಿವರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಗರಿಷ್ಟ 138ಮಿಮೀ ಮಳೆಯಾಗಿದೆ. ಚಿಕ್ಕಮಗಳೂರು ಕಸಬಾ 25.3, ವಸ್ತಾರೆ 6, ಜೋಳದಾಳ್ 28.6, ಆಲ್ದೂರು 43, ಅತ್ತಿಗುಂಡಿ 76.4, ಸಂಗಮೇಶ್ವರಪೇಟೆ 38,ಬ್ಯಾರುವಳ್ಳಿ 35.8, ಮಳಲೂರು 47.2, ಕಳಸ 34, ದಾಸರಹಳ್ಳಿ 45.2, ಮೂಡಿಗೆರೆ 54.2, ಗೋಣಿಬೀಡು 42, ಜಾವಳಿ 74, ಕಳಸ 81.2, ಹಿರೇಬೈಲು 75, ಹೊಸಕೆರೆ 102.2, ಬೆಳ್ಳೂರು 94.2, ನರಸಿಂಹರಾಜಪುರ 9.6, ಬಾಳೆಹೊನ್ನೂರು 53.6, ಮೇಗರಮಕ್ಕಿ 85, ಶೃಂಗೇರಿ 28, ಕಿಗ್ಗ 33.8, ಕೆರೆಕಟ್ಟೆ 104, ಕೊಪ್ಪ 25, ಹರಿಹರಪುರ 26, ಜಯಪುರ 68, ಬಸರಿಕಟ್ಟೆ 75.6, ಕಮ್ಮರಡಿ 11.8, ತರೀಕೆರೆ 30.8, ಲಕ್ಕವಳ್ಳಿ 18.2, ರಂಗೇನಹಳ್ಳಿ 86.4, ಲಿಂಗದಹಳ್ಳಿ 15, ಉಡೇವಾ 48, ತಣಿಗೆಬೈಲು 21, ತ್ಯಾಗದಬಾಗಿ 30.6, ಹುಣಸಘಟ್ಟ 15, ಕಡೂರು 45, ಬೀರೂರು 34, ಸಖರಾಯಪಟ್ಟಣ 17.4, ಸಿಂಗಟಗೆರೆ 56.4, ಪಂಚನಹಳ್ಳಿ 85.4, ಎಮ್ಮೆದೊಡ್ಡಿ 48.2, ಯಗಟಿ45.4, ಗಿರಿಯಾ ಪುರ  14,ಬಾಸೂರು 40, ಚೌಳಹಿರಿಯೂರು 24.3, ಅಜ್ಜಂಪುರ 9, ಶಿವನಿಯಲ್ಲಿ 5ಮೀಮೀ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News