×
Ad

ಮಡಿಕೇರಿ | ಅಭ್ಯತ್ ಮಂಗಲದಲ್ಲಿ ಪ್ರತ್ಯಕ್ಷವಾದ ಕಾಡಾನೆಗಳ ಹಿಂಡು; ತೋಟ, ಗದ್ದೆ ನಾಶ: ಆತಂಕದಲ್ಲಿ ಗ್ರಾಮಸ್ಥರು

Update: 2022-08-05 19:26 IST

ಮಡಿಕೇರಿ ಆ.5 : ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಹಾಡಹಗಲೇ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಆತಂಕವನ್ನು ಸೃಷ್ಟಿಸಿದೆ. ಬಹುತೇಕ ಗದ್ದೆಗಳು ಹಾಗೂ ತೋಟಗಳು ವನ್ಯಜೀವಿಯ ದಾಳಿಗೆ ನಾಶವಾಗಿದೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮರಿಯಾನೆಗಳೊಂದಿಗೆ ಗಂಡಾನೆ ಹಾಗೂ ಹೆಣ್ಣಾನೆ ಸಂಚರಿಸುತ್ತಿದ್ದು, ಮುಖ್ಯ ರಸ್ತೆಯ ಮೂಲಕ ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿವೆ. ಹೀಗೆ ಸಂಚರಿಸುವಾಗ ಮರಿಯಾನೆಗಳು ಕಣ್ಣಿಗೆ ಕಾಣದಾದಾಗ ಜೋರಾಗಿ ಘೀಳಿಡುವ ಕಾಡಾನೆಗಳು ಕೋಪದಿಂದ ತೋಟಗಳನ್ನು ನಾಶ ಮಾಡುತ್ತಿವೆ.

ಇಂದು ಬೆಳೆಗಾರರಾದ ಅಂಚೆಮನೆ ಸುಧಿ ಹಾಗೂ ಆದರ್ಶ ಅವರುಗಳ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡು ಸಾಕಷ್ಟು ಹಾನಿ ಮಾಡಿದೆ. 15 ದಿನಗಳ ಹಿಂದೆಯಷ್ಟೇ ಭತ್ತದ ಬಿತ್ತನೆ ಮಾಡಿದ್ದು, ಮುಂದಿನವಾರ ನಾಟಿ ಮಾಡಲು ತಯಾರಿ ನಡೆಸುತ್ತಿರುವಾಗಲೇ ಎಲ್ಲವೂ ಆನೆ ಪಾಲಾಗಿದೆ. ಅಂಚೆಮನೆ ಕುಟುಂಬಕ್ಕೆ ಸೇರಿದ ಕಾಫಿ ಮತ್ತು ಅಡಿಕೆ ತೋಟಕ್ಕೂ ಹಾನಿಯಾಗಿದ್ದು, ಅಡಿಕೆ ಗಿಡಗಳು ನೆಲಸಮವಾಗಿವೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜೆಯಾಗುತ್ತಲೇ ರಸ್ತೆಗಳಲ್ಲಿ ಕಾಡಾನೆಗಳ ಹಿಂಡಿನ ಸಂಚಾರ ಹೆಚ್ಚಾಗಿ ಕಂಡು ಬರುತ್ತಿದ್ದು, ಶಾಲೆ ಬಿಟ್ಟು ಮನೆಗೆ ಬರುವ ಮಕ್ಕಳು ಹಾಗೂ ತೋಟದ ಕಾರ್ಮಿಕರು ಭಯಗೊಂಡಿದ್ದಾರೆ. ಅತ್ತಿಮಂಗಲದಿಂದ ಒಂಟಿಯಂಗಡಿ ವರೆಗೆ ವಿದ್ಯುತ್ ಕಂಬಗಳನ್ನು ಹಾಕಲಾಗಿದೆಯಾದರೂ ಬೀದಿದೀಪಗಳಿಲ್ಲ. ಕಾರ್ಗತ್ತಲಿನಲ್ಲಿ ಕಾಡಾನೆಗಳು ಸಂಚರಿಸುವಾಗ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಮತ್ತು ಗ್ರಾ.ಪಂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. 

ಅತಿಯಾದ ಮಳೆಯೊಂದಿಗೆ ಕಾಡಾನೆಗಳ ದಾಳಿಯೂ ನಿರಂತರವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ದಾಳಿಯಿಂದ ಉಂಟಾದ ನಷ್ಟದ ಬಗ್ಗೆ ವರದಿ ತಯಾರಿಸಿ ಸೂಕ್ತ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಅಲ್ಪಪ್ರಮಾಣದ ಪರಿಹಾರ ನೀಡಬಾರದೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. 

::: ಅಧಿಕಾರಿಗಳ ಭೇಟಿ 

ಇಂದು ಸಂಜೆ ಅಭ್ಯತ್ ಮಂಗಲಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗಟ್ಟುವ ಭರವಸೆ ನೀಡಿದರು. ಹಾನಿಗೊಳಗಾದ ಗದ್ದೆ ಮತ್ತು ತೋಟವನ್ನು ಪರಿಶೀಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News