ಜನತೆ ಎಚ್ಚೆತ್ತುಕೊಳ್ಳದಿದ್ದರೆ ಉಸಿರಾಡುವ ಗಾಳಿಗೂ ತೆರಿಗೆ ಹಾಕ್ತಾರೆ: ಪ್ರಿಯಾಂಕ್ ಖರ್ಗೆ ಕಿಡಿ

Update: 2022-08-05 15:41 GMT
ಪ್ರಿಯಾಂಕ್ ಖರ್ಗೆ

ಕಲಬುರಗಿ, ಆ.5: ತರಕಾರಿ, ಹಾಲು, ಗ್ಯಾಸ್, ಪೆಟ್ರೋಲ್ ಸೇರಿ ಮಕ್ಕಳ ಪೆನ್ಸಿಲ್‍ಗೂ ಶೇ.12ರಷ್ಟು ಜಿಎಸ್‍ಟಿ ವಿಧಿಸಿರುವ ಬಿಜೆಪಿ ಸರಕಾರ, ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜನತೆ ಎಚ್ಚತ್ತುಕೊಳ್ಳದಿದ್ದರೆ ನಾವು ಉಸಿರಾಡುವ ಗಾಳಿಗೂ ತೆರಿಗೆ ಹಾಕುತ್ತಾರೆ ಹುಷಾರ್ ಎಂದು ಹಾಲಿ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶುಕ್ರವಾರ ವಾಡಿ ಕೊಲ್ಲೂರು ಗ್ರಾಮದಲ್ಲಿ ಒಟ್ಟು 2 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಾಗೂ ಪ್ರೌಢ ಶಾಲೆಯ ಎರಡು ಹೆಚ್ಚುವರಿ ಕೋಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಕಡಿತಗೊಳಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಸರಕಾರ ಬಡವರ ಶಕ್ತಿಯನ್ನು ಕುಂದಿಸಿದೆ. ಜನಸಾಮಾನ್ಯರಿಂದ ವಸೂಲಿ ಮಾಡಿಕೊಂಡ ಜಿಎಸ್‍ಟಿ ದುಡ್ಡು ಮರಳಿ ಜನರಿಗೆ ಕೊಡುವ ಬದಲು ಅಂಬಾನಿ, ಅದಾನಿಗಳ ಜೇಬುಗಳಿಗೆ ಹಾಕುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ರಾಜ್ಯಾದ್ಯಂತ 701 ಕೋಟಿ ರೂ. ವಾಹನಗಳ ದಂಡ ಜಮೆಯಾಗಿದೆ. ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಒಟ್ಟಿನಲ್ಲಿ ಬಿಜೆಪಿ ಸರಕಾರ ತೊಲಗುವವರೆಗೂ ಜನತೆಗೆ ನೆಮ್ಮದಿ ಸಿಗುವುದಿಲ್ಲ ಎಂದು ಕಿಡಿಕಾರಿದರು.

ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಗ್ರಾಪಂ ಅಧ್ಯಕ್ಷೆ ಸಾಬಮ್ಮ ಶಿವುಕುಮಾರ ಕನಗನಹಳ್ಳಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ವೀರಣ್ಣಗೌಡ ಪರಸರೆಡ್ಡಿ, ಅಬ್ದುಲ್ ಅಜೀಜ್‍ಸೇಠ ರಾವೂರ, ಶ್ರೀನಿವಾಸ ಸಗರ, ಶರಣುಸಾಹು ಬಿರಾಳ, ಕೃಷ್ಣರೆಡ್ಡಿ, ಟೋಪಣ್ಣ ಕೋಮಟೆ, ಗುಂಡುಗೌಡ ಪಾಟಿಲ, ಶ್ರೀಶೈಲ್ ನಾಟೀಕಾರ, ಹಣಮಂತ ಚವ್ಹಾಣ, ರಮೇಶ ಹಡಪದ, ಶಿವಯೋಗಿ ಕಾಗಿ, ಸಾಬಣ್ಣ ಹೊಸಮನಿ ಬನ್ನೇಟಿ, ಎಂ.ಡಿ.ಕರೀಮ್, ಸಂತೋಷಕುಮಾರ ಮಳಬಾ, ಬಾಬು ಕಡಲೇಕ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News