ಕೊಡಗಿನಲ್ಲಿ ಭಾರೀ ಮಳೆಗೆ ವಿವಿಧೆಡೆ ಹಾನಿ: ನಾಳೆ (ಆ.6) ಶಾಲೆಗಳಿಗೆ ರಜೆ

Update: 2022-08-05 16:12 GMT

ಮಡಿಕೇರಿ ಆ.5 : ಕೊಡಗು ಜಿಲ್ಲೆಯಾದ್ಯಂತ ಮಹಾಮಳೆ ಅಬ್ಬರಿಸುತ್ತಿದೆ. ಗ್ರಾಮೀಣ ಭಾಗ ಮತ್ತು ಬೆಟ್ಟ, ಗುಡ್ಡ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಆ.6 ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಂಪಾಜೆ ಹೋಬಳಿ ಚೆಂಬು ವೃತ್ತದ ಊರುಬೈಲು, ಚೆಂಬು, ದಬ್ಬಡ್ಕ, ಮೇಲ್ ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ದಬ್ಬಡ್ಕ ಭಾಗದಲ್ಲಿ ಜಲಸ್ಫೋಟದೊಂದಿಗೆ ಗುಡ್ಡ ಕುಸಿಯುತ್ತಲೇ ಇದ್ದು, ಅಲ್ಲಿನ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮನೆ ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ಮದೆನಾಡು ಗ್ರಾ.ಪಂ ವ್ಯಾಪ್ತಿಯ ಬೆಟ್ಟತ್ತೂರು ಭಾಗದಲ್ಲೂ ಬೃಹತ್ ಬರೆ ಕುಸಿದಿದ್ದು, ಮಣ್ಣು ತೆರವು ಸಂದರ್ಭ ಜೆಸಿಬಿ ಯಂತ್ರ ಮಗುಚಿದ ಘಟನೆಯೂ ನಡೆದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಚೆಂಬು ಭಾಗದ ಮಾರ್ಪಡ್ಕ ಸೇತುವೆ, ಆನೆಹಳ್ಳ ಸೇತುವೆ ಹಾಗೂ ದಬ್ಬಡ್ಕ ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. 

ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಹಾನಿಯಾಗಿದೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮತ್ತು ನೋಡಲ್ ಅಧಿಕಾರಿ ಶ್ರೀನಿವಾಸ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮನೆಗಳಿಗೆ ಭೇಟಿ ನೀಡಿ ಮಳೆ ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರದಲ್ಲಿರುವಂತೆ ಮನವಿ ಮಾಡಿದರು. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 34 ಮಂದಿ ಸ್ಥಳಾಂತರಗೊಂಡಿದ್ದಾರೆ.

ಮಳೆಯಿಂದ ಮನೆಹಾನಿಗೊಳಗಾದ ದಬ್ಬಡ್ಕ ಗ್ರಾಮದ ಕೊಪ್ಪದ ಬಾಲಕೃಷ್ಣ ಹಾಗೂ ಎನ್.ಕೆ.ಉಮೇಶ್ ಅವರಿಗೆ ಕ್ರಮವಾಗಿ ರೂ.10 ಸಾವಿರ ಮತ್ತು 95,100 ರೂ. ಗಳ ಪರಿಹಾರದ ಚೆಕ್ ನ್ನು ಶಾಸಕ ಕೆ.ಜಿ.ಬೋಪಯ್ಯ ವಿತರಿಸಿದರು. ಪೆರಾಜೆ ಗ್ರಾಮದ ಉಪೇಂದ್ರ ಹಾಗೂ ತಂಗಪ್ಪನ್ ಪುರುಷೋತ್ತಮ್ ನಾಯರ್ ಅವರಿಗೆ 10 ಸಾವಿರ ರೂ.ಗಳ ಚೆಕ್ ನೀಡಲಾಯಿತು.

ಮಡಿಕೇರಿ ತಾಲೂಕು ತಹಶೀಲ್ದಾರರಾದ ಪಿ.ಎಸ್.ಮಹೇಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭು ಈ ಸಂದರ್ಭ ಹಾಜರಿದ್ದರು.

::: ತಡೆಗೋಡೆ ಕುಸಿತ ::: 

ಮಡಿಕೇರಿ ನಗರದಲ್ಲಿ ಎರಡು ಮನೆಗಳ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮಣ್ಣು ಜರಿಯುತ್ತಲೇ ಇರುವುದರಿಂದ ಮನೆಗಳು ಬೀಳುವ ಹಂತದಲ್ಲಿವೆ.
ತಿತಿಮತಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೋಮವಾರಪೇಟೆ ರಸ್ತೆಯಲ್ಲೂ ಮರ ಬಿದ್ದು ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

::: ಸಂಪಾಜೆಯಲ್ಲಿ ಮಳೆ ಕಡಿಮೆ ::: 

ಕಳೆದ ನಾಲ್ಕು ದಿನಗಳಿಂದ ಪ್ರವಾಹದಲ್ಲಿ ಮುಳುಗಿದ್ದ ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಪಯಸ್ವಿನಿ ನದಿಯ ಪ್ರವಾಹ ಇಳಿದಿದ್ದು, ರಸ್ತೆಗಳಲ್ಲಿ ವಾಹನಗಳು ಸಂಚರಿಸಬಹುದಾಗಿದೆ. ಆದರೆ ಕೊಯನಾಡು ಮತ್ತು ದೇವರಕೊಲ್ಲಿ ಬಳಿ ರಸ್ತೆಗೆ ಹಾನಿಯಾಗಿರುವುದರಿಂದ ಬಸ್ ಹಾಗೂ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾರೀ ವಾಹನಗಳು ಮತ್ತು ಸರಕು ತುಂಬಿದ ಲಾರಿಗಳ ಸಂಚಾರವನ್ನು ನಿಷೇಧಿಸಲಾಗಿದೆ. 

::: ರೆಡ್ ಅಲರ್ಟ್ 

ಮುಂದಿನ 4 ದಿನಗಳ ಕಾಲ ಜಿಲ್ಲೆಯಲ್ಲಿ 100 ರಿಂದ 200 ಮಿ.ಮೀ ನಷ್ಟು ಮಳೆಯಾಗುವ ಸಾಧ್ಯತೆಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ.6 ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News