ರಾಜ್ಯದಲ್ಲಿ ಇನ್ನೂ 2 ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ
ಬೆಂಗಳೂರು, ಆ. 6: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ (RAIN) ಮುಂದುವರಿದಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45ರಿಂದ 55 ಕಿಮೀ ವರೆಗೂ ತಲುಪುವ ಸಾಧ್ಯತೆಗಳಿದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದ ವರೆಗಿನ ಕರಾವಳಿಯುದ್ದಕ್ಕೂ ಹೆಚ್ಚಿನ ಅಲೆಗಳ ಮುನ್ಸೂಚನೆ ನಾಳೆ(ಆ.7) ರಾತ್ರಿಯ ವರೆಗೂ 3.5ರಿಂದ 4.1 ಮೀಟರ್ ಎತ್ತರದ ಅಲೆಗಳ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಮಳೆ/ಗುಡುಗು ಸಹಿತ ಮಳೆಯಾಗು ಸಾಧ್ಯತೆಗಳಿವೆ. ಬೆಳಗ್ಗೆಯಿಂದಲೇ ನಗರದಲ್ಲಿ ಅಲ್ಲಲ್ಲಿ ಬಿಟ್ಟು ಬಿಡದೆ ಜಿಟಿಜಿಟಿ ಮಳೆ ಬಿದ್ದ ಪರಿಣಾಮ ಜನ ಜೀವನಕ್ಕೆ ತೀವ್ರ ತೊಂದರೆ ಉಂಟಾಯಿತು. ಸಾರ್ವಜನಿಕ ಪ್ರಯಾಣಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಯಿತು.