×
Ad

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ: ರೆಡ್ ಅಲರ್ಟ್ ವಿಸ್ತರಣೆ, 15 ಕುಟುಂಬಗಳ ಸ್ಥಳಾಂತರ

Update: 2022-08-06 18:45 IST

ಮಡಿಕೇರಿ ಆ.6 : ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆ ಆತಂಕವನ್ನು ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ರೆಡ್ ಅಲರ್ಟ್ ವಿಸ್ತರಿಸಲಾಗಿದೆ. ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಜೀವನದಿ ಕಾವೇರಿ ಮತ್ತೆ ಉಕ್ಕಿ ಹರಿಯಲಾರಂಭಿಸಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಏರ್ಪಟ್ಟಿದೆ. ಗಾಳಿ, ಮಳೆಯ ಆರ್ಭಟಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ, ಹಲವೆಡೆ ಮರಗಳು ಧರೆಗುರುಳಿವೆ, ಮನೆಗಳು ಕುಸಿದು ಅಪಾರ ಹಾನಿ ಸಂಭವಿಸಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದೆ. ಮಳೆಯ ಆರ್ಭಟ ಮುಂದುವರಿದಲ್ಲಿ ಮಡಿಕೇರಿ ರಸ್ತೆಯೂ ಮುಳುಗಡೆಯಾಗುವ ಸಾಧ್ಯತೆಗಳಿದೆ.

 ಜಿಲ್ಲೆಯ ಗಡಿ ಭಾಗಗಳಾದ ಚೆಂಬು, ದಬ್ಬಡ್ಕ, ಸಂಪಾಜೆ ವಿಭಾಗಗಳಲ್ಲಿ ಧಾರಾಕಾರ ಮಳೆಯಿಂದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಗಾಳಿ ಮಳೆ ಶನಿವಾರ ಮತ್ತಷ್ಟು ಬಿರುಸುಗೊಂಡ ಪರಿಣಾಮ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಗ್ರಾಮಗಳು ಕಳೆದ ಒಂದು ವಾರದಿಂದ ಕಾರ್ಗತ್ತಲಿನಲ್ಲಿ ಮುಳುಗಿವೆ.

::: ಸಂಪರ್ಕ ಕಡಿತ :::

ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗಗಳಲ್ಲಿಯೂ ಮಹಾಮಳೆಯಾಗುತ್ತಿದೆ. ನಾಪೋಕ್ಲು ಬಳಿಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ಪ್ರವಾಹದ ನೀರು ಆವರಿಸಿದ್ದು, ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು-ಚೆರಿಯಪರಂಬು-ಕಲ್ಲುಮೊಟ್ಟೆ ರಸ್ತೆಯಲ್ಲೂ ವಾಹನ ಸಂಚಾರ ಅಸಾಧ್ಯವಾಗಿದೆ.

ರಸ್ತೆ ಕುಸಿತ 

ಹೊದವಾಡ ಮತ್ತು ಕೊಟ್ಟಮುಡಿ ಮೂಲಕ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಾಶ್ರ್ವ  ಭಾರೀ ಮಳೆಯಿಂದಾಗಿ ಕುಸಿದಿದೆ. ಲೋಕೋಪಯೋಗಿ ಇಲಾಖೆ ಮೂಲಕ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ರಸ್ತೆಯಲ್ಲಿ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಭಾರೀ ವಾಹನಗಳು ಪರ್ಯಾಯ ಮಾರ್ಗವಾಗಿ ಹೊದವಾಡ-ಬೊಳಿಬಾಣೆ ಮೂಲಕ ನಾಪೋಕ್ಲು ಹಾಗೂ ಮೂರ್ನಾಡು ಕಡೆಗಳಿಗೆ ಸಂಚರಿಸಬಹುದಾಗಿದೆ.

ರಸ್ತೆ ಕುಸಿದ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ, ತಹಶೀಲ್ದಾರ್ ಪಿ.ಎಸ್.ಮಹೇಶ್ ಹಾಗೂ ಲೋಕೋಪಯೋಗಿ ಇಂಜಿನಿಯರ್‍ಗಳು ಭೇಟಿ ನೀಡಿ ಪರಿಶೀಲಿಸಿದರು.

::: ಕುಟುಂಬಗಳ ಸ್ಥಳಾಂತರ :::

ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋರ ಗ್ರಾಮದ 15 ಕುಟುಂಬಗಳ 41 ಸದಸ್ಯರನ್ನು  ತೋಮರ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 2019 ರಲ್ಲಿ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಜೀವಹಾನಿ ಉಂಟಾಗಿತ್ತು. ಈ ಹಿನ್ನೆಲೆ ಪ್ರಸ್ತುತ ಭಾರೀ ಮಳೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.

::: ಮನೆ ಕುಸಿತ :::

ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಚಂದಮಕ್ಕಿ ಗ್ರಾಮದ ಲಕ್ಷ್ಮಣ್ ಹಾಗೂ ಮಾಲಂಬಿ ಕೂಡು ರಸ್ತೆಯ ಲಕ್ಷ್ಮಮ್ಮ ಮುತ್ತಣ್ಣ ಎಂಬವರ ಮನೆ ಕುಸಿದು ಬಿದ್ದ ಘಟನೆ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮದೆ ಗ್ರಾ.ಪಂ ವ್ಯಾಪ್ತಿಯಲ್ಲೂ ಮನೆಗಳಿಗೆ ಹಾನಿಯಾಗಿದೆ.

::: ರೆಡ್ ಅಲರ್ಟ್

ಎಡೆಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರ ಜು.7 ರಂದು ಕೂಡ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಫೋಟೋ :: ಮದೆ, ಹಾನಗಲ್ಲು, ವಣಚಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News