×
Ad

ಈ ಬಾರಿ ಅದ್ದೂರಿ ದಸರಾ,14 ಆನೆಗಳು ಭಾಗಿ: ಸಚಿವ ಎಸ್.ಟಿ. ಸೋಮಶೇಖರ್

Update: 2022-08-06 19:33 IST
ಫೈಲ್ ಚಿತ್ರ 

ಮೈಸೂರು,ಆ.6: ಮೈಸೂರು ದಸರಾದಲ್ಲಿ ಭಾಗವಹಿಸಲು 14 ಆನೆಗಳನ್ನು ಗುರುತಿಸಲಾಗಿದ್ದು, ಆ.7 ರ ರವಿವಾರ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುವುದು ಎಂದು  ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಭಾಗವಹಿಸಲು 14 ಆನೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಸಾಂಪ್ರದಾಯಿಕವಾಗಿ ನಾಳೆ ಪೂಜೆ ಸಲ್ಲಿಸಿ ಮೈಸೂರಿನತ್ತ ಕರೆತರಲಾಗುವುದು. ಹೈಪವರ್ ಕಮಿಟಿ ತೀರ್ಮಾನದಂತೆ ದಸರಾದಲ್ಲಿ ಭಾಗವಹಿಸುವ ಆನೆಗಳನ್ನು ರಸ್ತೆಯಲ್ಲಿ ನಡೆಸಿಕೊಂಡು ಬರಬೆಕು ಎಂದು ತೀರ್ಮಾನ ಆಗಿತ್ತು. ಆದರೆ ಆನೆಗಳನ್ನು 15 ಕೀ.ಮೀ. ಗೂ ಹೆಚ್ಚು ನಡೆಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ಆನೆಗಳನ್ನು ನಡೆಸಿಕೊಂಡು ಬಂದರೆ ಆನೆಗಳಿಗೆ ತೊಂದರೆಯಾಗಬಹುದು ಎಂಬ ಉದ್ದೇಶದಿಂದ ಕೈಬಿಡಲಾಗಿದೆ ಎಂದು  ಹೇಳಿದರು.

ನಾಳೆ ಆನೆಗಳಿಗೆ ಪೂಜೆ ಸಲ್ಲಿಸಿ ಮೈಸೂರಿನತ್ತ ಕರೆತರಲಾಗುವುದು. ಆ.10ರಂದು ಅರಮನೆಗೆ ಆನೆಗಳನ್ನು ಬರಮಾಡಿಕೊಳ್ಳಲಾಗುವುದು ಎಂದು  ಹೇಳಿದರು.

ಈಗಾಗಲೇ ದಸರಾಗೆ ಸಂಬಂಧಪಟ್ಟಂತೆ 16 ಕಮಿಟಿಗಳನ್ನು ಮಾಡಲಾಗಿದ್ದು. ಪ್ರತಿಯೊಂದು ಕಮಿಟಿಯಲ್ಲೂ ಐಎಎಸ್, ಕೆಎಎಸ್ ಅಧಿಕಾರಿಗಳು ಇರಲಿದ್ದಾರೆ. ಯಾವ ಕಮಿಟಿಗೆ ಯಾವ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಬೇಕು ಎಂಬುದು ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ ಎಂದು ಹೇಳಿದರು.

ಹೈಪವರ್ ಕಮಿಟಿ ತೀರ್ಮಾನದಂತೆ ಚಾಮರಾಜನಗರ ಮತ್ತು ಶ್ರೀರಂಗಪಟ್ಟಣಗಳಲ್ಲಿ ನಡೆಯುವ ದಸರಾಗೆ ಪ್ರತ್ಯೇಕವಾಗಿ 1 ಕೋಟಿ.ರೂ.ನೀಡಲಾಗುವುದು. ದಸರಾ ಉತ್ಸವವನ್ನು ದೇಶ–ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅದ್ದೂರಿ ಹಾಗೂ ಸಾಂಪ್ರದಾಯಿಕವಾಗಿ ನಡೆಸಲಾಗುವುದು ಎಂದು ಹೇಳಿದರು.

ಅರಮನೆಯೊಳಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳ ವೆಚ್ಚವ ಸುಮಾರು 5 ಕೋಟಿ. ರೂ. ಗಳಾಗಬಹದು ಅದನ್ನು ಅರಮನೆ ಆಡಳಿತ ಮಂಡಳಿ ಭರಿಸಲಿದೆ. ಇದರೊಟ್ಟಿಗೆ ಮುಡಾ 10 ಕೋಟಿ. ರೂ ನೀಡಲಿದೆ. ಇನ್ನುಳಿದ ವೆಚ್ಚಗಳ ಅಂದಾಜು ಪಟ್ಟಿಯನ್ನು ತಯಾರು ಮಾಡಲು ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 1600 ಮನೆಗಳು ಹಾನಿಯಾಗಿದ್ದು, ಅದಕ್ಕೆಲ್ಲಾ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಣಕ್ಕೆ ಯಾವುದೇ ಕೊರತೆ ಇಲ್ಲ.

 -ಎಸ್.ಟಿ.ಸೋಮಶೇಖರ್,ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News