ಬ್ಯಾನರ್ ಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಲು ಮುಖ್ಯಮಂತ್ರಿ, ಸಚಿವರಿಗೆ ಪ್ರಾಧಿಕಾರದ ಪತ್ರ

Update: 2022-08-06 14:52 GMT

ಬೆಂಗಳೂರು, ಆ. 6: ‘ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದು ತಮ್ಮ ಜವಾಬ್ದಾರಿ ಆಗಿರುತ್ತದೆ' ಎಂದು ಮುಖ್ಯಮಂತ್ರಿ, ಸರಕಾರದ ಕಾರ್ಯದರ್ಶಿಗಳು ಹಾಗೂ ಎಲ್ಲ ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಪತ್ರ ಬರೆದಿದ್ದಾರೆ. 

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಸರಕಾರವು ಕನ್ನಡವನ್ನು ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸಲು ಅನೇಕ ಸುತ್ತೋಲೆ ಮತ್ತು ಆದೇಶಗಳನ್ನು  ಹೊರಡಿಸುತ್ತಾ ಬಂದಿದೆ. ಆದರೂ ಸರಕಾರದ ಇಲಾಖೆಗಳು ಕೆಲವು ಸಣ್ಣ-ಪುಟ್ಟ ಸಂಗತಿಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಅಂಶಗಳು ಸರಕಾರದ ಗಮನಕ್ಕೆ ಬಂದಿದ್ದರೂ, ವಿವಿಧ ಇಲಾಖೆಗಳು ನಡೆಸುವ ಅಧಿಕೃತ ಸಮಾರಂಭ, ವೇದಿಕೆಯಲ್ಲಿ ಹಾಕುವ ಬ್ಯಾನರುಗಳಲ್ಲಿ ಕನ್ನಡವನ್ನು ಬಳಸುವುದು ಕಡ್ಡಾಯವಾಗಬೇಕು' ಎಂದು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆ. ಕನ್ನಡ ಭಾಷೆ ನಮಗೆ ಆದ್ಯತೆ ಭಾಷೆಯಾಗಬೇಕೆ ಹೊರತು, ಆಯ್ಕೆಯಾಗಬಾರದು. ಕನ್ನಡ ಭಾಷೆಯನ್ನು ಬಳಸದ ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಯಕ್ರಮಗಳಲ್ಲಿ ತಾವುಗಳು ಭಾಗವಹಿಸುವುದರಿಂದ ಪ್ರಾಧಿಕಾರದ ಜೊತೆಗೆ ಸರಕಾರಕ್ಕೂ ಮುಜುಗರ ಉಂಟಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಪ್ರಾಧಿಕಾರವನ್ನು ಗುರುತು ಮಾಡಿ ಟೀಕೆ ಟಿಪ್ಪಣಿಗಳನ್ನು ಮಾಡುವುದರೊಂದಿಗೆ ಈ ಸರಕಾರಕ್ಕೆ ಕನ್ನಡದ ಬದ್ಧತೆಯಿಲ್ಲವೆಂಬಂತೆ ಚರ್ಚೆ ನಡೆಯುತ್ತಿದೆ' ಎಂದು ಅವರು ಹೇಳಿದ್ದಾರೆ.

‘ಇನ್ನು ಮುಂದೆ ನಡೆಯುವ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಅಳವಡಿಸಲಾಗುವ ಪರದೆಗಳಲ್ಲಿ, ಫಲಕಗಳಲ್ಲಿ ಅಲ್ಲದೇ ಒಟ್ಟಾರೆಯಾಗಿ ಕಾರ್ಯಕ್ರಮದ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕು' ಎಂದು ನಾಗಾಭರಣ ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News