ಮಳೆ ಹಾನಿ ಪರಿಹಾರದಲ್ಲಿ ತಾರತಮ್ಯ ಆರೋಪ: 'ಕೊಡಗು ಯಾವ ರಾಜ್ಯದಲ್ಲಿದೆ?' ಎಂದು ಪ್ರಶ್ನಿಸಿದ ನೆಟ್ಟಿಗರು

Update: 2022-08-06 18:44 GMT

ಮಡಿಕೇರಿ, ಆ.6: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿ ರೂ. ಬಿಡುಗಡೆ ಮಾಡಲು  ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದು, ಕೊಡಗು ಜಿಲ್ಲೆಗೆ ಪರಿಹಾರ ಘೋಷಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಇಂದು (ಶನಿವಾರ ) ಸಂಜೆ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಿಂದಲೇ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಸಿಎಂ ಬೊಮ್ಮಾಯಿ,  ಪರಿಹಾರ ಬಿಡುಗೊಳಿಸುವಂತೆ ಆದೇಶಿಸಿದ್ದು, ಈ ಕುರಿತಾದ ಮಾಹಿತಿಯನ್ನು ತನ್ನ ಅಧಿಕೃತ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಸಿಎಂ ಅವರ ಟ್ವೀಟ್ ಹಾಗೂ ಫೇಸ್ ಬುಕ್ ಪೋಸ್ಟ್ ನಲ್ಲಿ 21 ಜಿಲ್ಲೆಗಳ ಹೆಸರು ಹಾಗೂ ಪರಿಹಾರದ ಮೊತ್ತದ ವಿವರ ಇರುವ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕೊಡಗು ಜಿಲ್ಲೆಯ ಹೆಸರು ಕಾಣಿಸುವುದಿಲ್ಲ. ಸದ್ಯ ಇದರ ಸ್ಕ್ರೀನ್ ಶಾಟ್ ಸಾಮಾಜಿಕ ತಾಣದಾದ್ಯಂತ ವೈರಲ್ ಆಗುತ್ತಿದ್ದು, ''ಬೆಂಗಳೂರಿಗೆ ಕಾವೇರಿ ನೀರು ಕೊಡುವ ಪುಟ್ಟ ಕೊಡಗು ನಿಮ್ಮ ಗಮನಕ್ಕೆ ಬರಲಿಲ್ಲವೇ'' ಎಂದು ಸಿಎಂ ಬೊಮ್ಮಾಯಿ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 


''ನಾವು ಕೊಡಗಿನವರು ಈ ಮಳೆಯಲ್ಲಿ ಅಕ್ಷರಶ ನಲುಗಿ ಹೋಗಿದ್ದೇವೆ, ಗುಡ್ಡಗಳು ಕುಸಿದು ಬೀಳುತ್ತಿವೆ, ಹೊಳೆಗಳು ಉಕ್ಕೇರಿ ಬಂದು ಊರುಗಳು ಮುಳುಗಿ ಹೋಗುತ್ತಿವೆ, ತಾರು ರಸ್ತೆಗಳು ಮಳೆಯಿಂದಾಗಿ ಜರಿದು ಹೋಗುತ್ತಿದೆ, ನಮ್ಮ ಕೃಷಿ ಫಸಲುಗಳು ಅತಿವೃಷ್ಟಿಯಿಂದ ನೆಲಕಚ್ಚುತಿದೆ, ಮೈಸೂರು, ಮಂಡ್ಯ, ಬೆಂಗಳೂರಿಗೆ ಕಾವೇರಿ ನೀರು ಕೊಡುವ ಪುಟ್ಟ ಕೊಡಗು ನಿಮ್ಮ ಗಮನಕ್ಕೆ ಬರಲಿಲ್ಲವೇ ಮುಖ್ಯಮಂತ್ರಿಗಳೇ ? ಸಮಸ್ತ ಕೊಡಗಿನ ಜನರ ಪರವಾಗಿ ನಿಮಗೆ ನಮ್ಮ ಧಿಕ್ಕಾರವಿದೆ'' ಎಂದು ಅಚ್ಚಂದಿರ ಪವನ್ ಪೆಮ್ಮಯ್ಯ ಎಂಬವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 


''ಕೊಡಗಿನ ಶಾಸಕರು, ಸಂಸದರು ಎಲ್ಲರೂ ಬಿಜೆಪಿಗರೆ. ಏನ್ ಪ್ರಯೋಜನ ಬಂತು...!? ಕೊಡಗು ಈ ಮಳೆಗಾಲದಲ್ಲಿ ಅಕ್ಷರಶಃ ಪ್ರವಾಹ, ಗುಡ್ಡ ಕುಸಿತಗಳಿಂದ ನಲುಗಿ ಹೋಗಿದೆ...ಆದರೂ ಪ್ರವಾಹ ಪರಿಹಾರ ಅಂತ ಕರ್ನಾಟಕ ಸರ್ಕಾರ ಬಿಡಿಗಾಸನ್ನೂ ಕೊಡಗಿಗೆ ಬಿಡುಗಡೆ ಮಾಡಿಲ್ಲ...!! ಇದಲ್ಲವೇ ತಾರತಮ್ಯ...ಇದಲ್ಲವೇ ಮಲತಾಯಿ ಧೋರಣೆ...!? ನಿಮ್ಮ ಈ ಧೋರಣೆಗೆ ಕೊಡಗಿನ ಜನರ ಧಿಕ್ಕಾರವಿದೆ'' ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿಎಂ ಬೊಮ್ಮಾಯಿ ಅವರ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಜಿಲ್ಲೆ ಹಾಗೂ ಅನುದಾನ ಮೊತ್ತದ ವಿವರ ಇಂತಿದೆ...

ಬಳ್ಳಾರಿ- 5ಕೋಟಿ ರೂ., ಚಿಕ್ಕಮಗಳೂರು-10 ಕೋಟಿ ರೂ., ಚಿತ್ರದುರ್ಗ-5 ಕೋಟಿ ರೂ., ದಕ್ಷಿಣ ಕನ್ನಡ-20 ಕೋಟಿ ರೂ., ದಾವಣಗೆರೆ-15, ಧಾರವಾಡ-5 ಕೋಟಿ ರೂ., ಗದಗ-5 ಕೋಟಿ ರೂ., ಹಾಸನ-15 ಕೋಟಿ ರೂ., ಹಾವೇರಿ-5 ಕೋಟಿ ರೂ., ಕೊಪ್ಪಳ-10 ಕೋಟಿ ರೂ., ಮಂಡ್ಯ-10 ಕೋಟಿ ರೂ., ರಾಯಚೂರು-10 ಕೋಟಿ ರೂ., ಶಿವಮೊಗ್ಗ-10 ಕೋಟಿ ರೂ., ತುಮಕೂರು-10 ಕೋಟಿ ರೂ., ಉಡುಪಿ-15 ಕೋಟಿ ರೂ., ಉತ್ತರ ಕನ್ನಡ-10 ಕೋಟಿ ರೂ., ವಿಜಯನಗರ-5 ಕೋಟಿ ರೂ., ಮೈಸೂರು-15 ಕೋಟಿ ರೂ., ಚಾಮರಾಜನಗರ-5 ಕೋಟಿ ರೂ., ಕೋಲಾರ-5 ಕೋಟಿ ರೂ. ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ 10 ಕೋಟಿ ರೂ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News