ತೀರ್ಥಹಳ್ಳಿ | ಎದೆಮಟ್ಟದ ನೆರೆ ನೀರಿನಲ್ಲಿ ಮೃತದೇಹ ಹೊತ್ತೊಯ್ದು ಅಂತ್ಯ ಸಂಸ್ಕಾರ
ಶಿವಮೊಗ್ಗ, ಆ.7: ಸ್ಮಶಾನಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಮೃತದೇಹವೊಂದನ್ನು ಅಂತ್ಯಸಂಸ್ಕಾರ(funeral)ಕ್ಕೆ ನೆರೆ ನೀರಿನಲ್ಲೇ ಹೊತ್ತು ಸಾಗಿದ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ನಡೆದಿದೆ.
ಕೋಡ್ಲು ಗ್ರಾಮದ ತಮ್ಮಯ್ಯ ಗೌಡ(80) ಎಂಬವರು ವಯೋಸಹಜವಾಗಿ ಶನಿವಾರ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಎದೆಮಟ್ಟದಷ್ಟಿದ್ದ ಮಳೆ ನೀರಿನಲ್ಲೇ ಹೊತ್ತುಕೊಂಡು ಹೋದ ಗ್ರಾಮಸ್ಥರು ಸುರಿವ ಮಳೆಯ ನಡುವೆಯೇ ಅಂತ್ಯಸಂಸ್ಕಾರ ನೆರವೇರಿಸಿದರು.
ಇದನ್ನೂ ಓದಿ: ಮೊದಲ ಉಡಾವಣೆಯ ಬಳಿಕ ಸಮಸ್ಯೆಯಲ್ಲಿ ಸಿಲುಕಿಕೊಂಡ ಇಸ್ರೋದ SSLV ನೌಕೆ
ಇಲ್ಲಿನ ಸ್ಮಶಾನಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ತಗ್ಗು ಪ್ರದೇಶದಲ್ಲಿರುವ ಇಲ್ಲಿನ ರಸ್ತೆ ಮಳೆಗಾಲದಲ್ಲಿ 4-5 ತಿಂಗಳು ಮುಳುಗಡೆಯಾಗಿಯೇ ಇರುತ್ತದೆ. ಆದ್ದರಿಂದ ಪ್ರತಿ ಮಳೆಗಾಲದಲ್ಲೂ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಕೋಡ್ಲು ಗ್ರಾಮಸ್ಥರ ಪರದಾಡುವುದು ಸಾಮಾನ್ಯವಾಗಿದೆ. ಸ್ಮಶಾನಕ್ಕೆ ಎತ್ತರಿಸಿದ ರಸ್ತೆ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.