ಯುವಕರಿಗೆ ಉದ್ಯೋಗ ಕೊಡುವ ಮೂಲಕ ನಿಮ್ಮ ರಾಷ್ಟ್ರಪ್ರೇಮವನ್ನು ಪ್ರದರ್ಶಿಸಿ: ನಟ ಪ್ರಕಾಶ್ ರಾಜ್

Update: 2022-08-07 12:00 GMT

ಮೈಸೂರು: ಬೆಲೆ ಏರಿಕೆ ಇಳಿಸಿ ಯುವಕರಿಗೆ ಉದ್ಯೋಗ ಕೊಡುವ ಮೂಲಕ ನಿಮ್ಮ ರಾಷ್ಟ್ರಪ್ರೇಮವನ್ನು ಮೊದಲು ಪ್ರದರ್ಶಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ನಡೆದ ಮಾಧ್ಯಮ ಸಂವಾದದಲ್ಲಿ 'ಹರ್ ಘರ್ ತಿರಂಗಾ' ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾವುಟ ಸಹ ಪಾಲಿಸ್ಟರ್ ಮಾಡಿ ಖಾದಿ ಉದ್ಯಮ ನಂಬಿದವರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಬೀಡಿ ಕಾರ್ಮಿಕರಿಗೆ 18% ಜಿ.ಎಸ್.ಟಿ. ಹಾಕಲಾಗಿದೆ. ಇದು ನಿಮ್ಮ ರಾಷ್ಟ್ರಪ್ರೇಮನ ಎಂದು ಪ್ರಶ್ನಿಸಿದರು.

ಪ್ರಧಾನಿ, ಮುಖ್ಯಮಂತ್ರಿ ಸಂಸದರುಗಳು ತಮ್ಮ ಮನೆಯಿಂದ ಒಂದೂ ರೂ. ತರಲ್ಲ, ನಮ್ಮ ದುಡ್ಡಲ್ಲೆ ಅವರು ಸಂಬಳ ಸೇರಿದಂತೆ ಎಲ್ಲಾ ಭತ್ಯೆಯನ್ನು ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಮಾಡಿರುವ ಅಭಿವೃದ್ಧಿಯ ಲೆಕ್ಕ ಕೊಡಿ ಎಂದರೆ ಅವರಿಗೆ ಆಗುವುದಿಲ್ಲ, ಇವರನ್ನು ಯಾರೂ ಪ್ರಶ್ನಿಸಲೇಬಾರದು ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಘಂಟೆಗಳ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ಬಂದರೆ ಕೋಟ್ಯಾಂತರ ರೂ. ಖರ್ಚು ಮಾಡಿ ರಸ್ತೆ ಮಾಡಿಸುತ್ತಾರೆ. ಸಾಕಷ್ಟು ಹಣ ಖರ್ಚು ಮಾಡಿದ ರಸ್ತೆ ಕೆಲವೇ ದಿನಗಳಲ್ಲಿ ಹಾಳಗುತ್ತದೆ ಅದನ್ನು ನಾನು ಪ್ರಶ್ನೆ ಮಾಡಬಾರದೇ ಎಂದರು.

ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಯುತ್ತಲೇ ಇರುತ್ತದೆ. ಇದರ ಮೂಲಕ ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಖಂಡಿಸಿದ್ದೇನೆ. ತೀಸ್ತಾ ಸೆಟಲ್ವಾಡ್, ಆನಂದ್ ತೇಲ್ತುಂಬ್ಡೆ, ಜುಬೇರ್ ಬಂಧನವನ್ನು ಖಂಡಿಸುತ್ತಲೇ ಬಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕಾರಣಕ್ಕೆ ಬರುವ ಕುರಿತ ಬಗ್ಗೆ ಮಾತನಾಡಿದ ಅವರು, ನನಗೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್, ಕೇರಳ ಸಿಎಂ ಪಿಣರಾಯಿ ವಿಜಯ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲರೂ ಆತ್ಮೀಯರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ನೇಹಿತರೆ. ಹಾಗಂತ ನಾನು ಯಾರ ಜೊತೆಯಲ್ಲೂ ರಾಜಕೀಯ ಚರ್ಚೆಮಾಡಿಲ್ಲ, ಕೆಲವೊಮ್ಮೆ ಒಳ್ಳೆ ಕೆಲಸಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದರು.

ನಾನು ಕೆಲವು ವಿಚಾರಗಳನ್ನು ಪ್ರಶ್ನಿಸುತ್ತಲೇ ಬಂದಿದ್ದೇನೆ. ನನಗೂ ಹೆದರಿಸುವ ಕೆಲಸಗಳನ್ನು ಕೆಲವರು ಮಾಡುತ್ತಲೇ ಇದ್ದಾರೆ.  ನಾನಂತು ಬೇನಾಮಿ ಆಸ್ತಿ ಮಾಡಿಲ್ಲ, ತರಿಗೆ ವಂಚಿಸಿಲ್ಲ, ಇನ್ನು ಹನಿಟ್ರ್ಯಾಪ್ ಕೂಡ ಇಲ್ಲ, ಹಾಗಾಗಿ ನನ್ನನ್ನು ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನಾವು ಏನಾಗಬೇಕು ಎನ್ನುವುದು ಮುಖ್ಯವಲ್ಲ, ನಮ್ಮ ಮಕ್ಕಳಿಗೆ ಯಾವ ಸಮಾಜ ನಿರ್ಮಾಣ ಮಾಡುತ್ತಿದ್ದೇವೆ ಎಂಬುದು ಮುಖ್ಯ, ನಮಗೆ ಧರ್ಮಕ್ಕಿಂತ ಮಕ್ಕಳ ಶಿಕ್ಷಣ, ಆರೋಗ್ಯ ಮುಖ್ಯವಾಗಬೇಕು. ಯಾರು ಯಾವ ದೇವರನ್ನಾದರೂ ಪೂಜೆ ಮಾಡಬಹುದು ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಹಲವಾರು ಸಮಾಜ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದೇನೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ನಾನೊಬ್ಬ ಮಾಡಿದರೆ ಅದು ಸೇವೆಯಾಗುವುದಿಲ್ಲ, ಹಾಗಾಗಿ ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಪುನೀತ್ ರಾಜ್ ಕುಮಾರ್ ಮನುಷ್ಯತ್ವವನ್ನು ತೋರಿಸಿ ಹೋಗಿದ್ದಾರೆ. ಹಾಗಾಗಿ ಅವರ ನೆನಪಿಗಾಗಿ ಪ್ರತಿ ಜಿಲ್ಲೆಗೊಂದು ಆ್ಯಂಬುಲೆನ್ಸ್ ನೀಡಿ ಬಡವರ ಕಷ್ಟಕ್ಕೆ ನೆರವಾಗುತ್ತಿದ್ದೇವೆ ಎಂದು ಹೇಳಿದರು.

ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News