ಸರಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದೇ 'ನಿಯಮ'ದಂತೆ ಆಗಿದೆ: ಹೈಕೋರ್ಟ್ ಅಸಮಾಧಾನ

Update: 2022-08-07 13:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.7: ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳು ಆಗಬೇಕೆಂದರೆ ಲಂಚ ಪಡೆಯುವುದು ನಿಯಮ ಎನ್ನುವಂತಾಗಿದೆ ಹಾಗೂ ಇದು ಕ್ಯಾನ್ಸರ್ ಗಿಂತ ಗಂಭೀರವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಬೆಂಗಳೂರು ಡಿಸಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಹಿಂದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ತನ್ನ ತೀರ್ಪಿನಲ್ಲಿ ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ. 

ಕಂದಾಯ ಇಲಾಖೆಯಲ್ಲಿ ಲಂಚ ಇಲ್ಲದೆ ಯಾವುದೇ ಕಡತಗಳು ಮುಂದಕ್ಕೆ ಸಾಗುವುದಿಲ್ಲ. ಸರಕಾರಿ ಕಚೇರಿಗಳಲ್ಲಿನ ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ನಿಯಮವಾಗಿದೆ. ಈ ಕಾರ್ಯವು ಕ್ಯಾನ್ಸರ್ ಗಿಂತ ಗಂಭೀರವಾಗಿದೆ. ಈ ಕೇಸ್‍ನಲ್ಲಿ ಎಲ್ಲ ಗೊತ್ತಿದ್ದರೂ ಅರ್ಜಿದಾರ ಮಂಜುನಾಥ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸರಕಾರ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ ಎಂದು ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. 

ಮೂರನೆ ಆರೋಪಿಯಾಗಿರುವ ಮಂಜುನಾಥ್ ಗೆ ಜಾಮೀನು ಮಂಜೂರು ಮಾಡಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಪ್ರಥಮ ಮಾಹಿತಿ ಹೇಳಿಕೆಯಲ್ಲಿ ದೂರುದಾರ ಅಜಂ ಪಾಷಾ ಅರ್ಜಿದಾರರ ಹೆಸರು ಉಲ್ಲೇಖಿಸಿದ್ದರೂ ಎಫ್‍ಐಆರ್ ನಲ್ಲಿ ಅವರ ಹೆಸರು ಇಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News